ಲಾಹೋರ್:ನಾಯಕ ಬಾಬರ್ ಅಜಮ್ ಮತ್ತು ಇಮಾಮ್ ಉಲ್ ಹಕ್ರ ಭರ್ಜರಿ ಶತಕದ ಬಲದಿಂದ ಪಾಕಿಸ್ತಾನ ತಂಡ, ಆಸ್ಟ್ರೇಲಿಯಾ ನೀಡಿದ್ದ ದಾಖಲೆಯ 349 ರನ್ಗಳನ್ನು ಬೆನ್ನಟ್ಟುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿ 1-1 ರಲ್ಲಿ ಸಮಬಲಗೊಂಡಿದೆ.
ನಾಯಕ ಬಾಬರ್ ಅಜಂ 83 ಎಸೆತಗಳಲ್ಲಿ ಬಿರುಸಿನ 114 ರನ್ ಗಳಿಸಿದರೆ, ಇನ್ನೊಂದು ತುದಿಯಲ್ಲಿ ಇಮಾಮ್ 106 ರನ್ ಗಳಿಸಿ ಶತಕ ಸಂಭ್ರಮಾಚರಣೆ ಮಾಡಿದರು. ಪಾಕಿಸ್ತಾನ 49 ಓವರ್ಗಳಲ್ಲಿ 349/4 ಬಾರಿಸಿ 6 ವಿಕೆಟ್‌ಗಳ ಗೆಲುವಿನ ನಗೆ ಬೀರಿದೆ. ಇನ್ನು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ದಾಖಲೆಯ ಮೊತ್ತ ಚೇಸ್ ಮಾಡಿ ಜಯ ಸಾಧಿಸಿದೆ.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಬೆನ್ ಮೆಕ್ಡರ್ಮಾಟ್ರ(104) ಅಬ್ಬರದ ಚೊಚ್ಚಲ ಶತಕ, ಆರಂಭಿಕ ಆಟಗಾರ ಟ್ರೇವಿಸ್ ಹೆಡ್(89) ಅರ್ಧಶತಕ ಮತ್ತು ಮಾರ್ಕಸ್ ಸ್ಟೋಯನಿಸ್ರ (49) ಹೋರಾಟದಿಂದ 50 ಓವರ್ಗಳಲ್ಲಿ 348 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು.
ಸೋಲಿನ ಸರಣಿ ಅಂತ್ಯ:ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಸತತ 10 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಸರಣಿಯ 2ನೇ ಪಂದ್ಯದಲ್ಲಿ ದಾಖಲೆಯ ಗೆಲುವು ಕಾಣುವ ಮೂಲಕ ಸೋಲಿನ ಸರಣಿ ಮುರಿದಿದೆ. ಮೂರನೇ ಮತ್ತು ಕೊನೆಯ ಪಂದ್ಯ ನಾಳೆ ನಡೆಯಲಿದೆ. ಅಲ್ಲದೇ, ಏ.5 ರಂದು ಏಕೈಕ ಟಿ-20 ಪಂದ್ಯ ನಡೆಯಲಿದೆ.
ಓದಿ:ಮೊದಲ ಎಸೆತದಲ್ಲೇ ಸಿಕ್ಸರ್! ಎಬಿಡಿ ದಾಖಲೆ ಸರಿಗಟ್ಟಿದ ಧೋನಿ; IPLನಲ್ಲಿ 7 ಸಾವಿರ ರನ್ ಸರದಾರ