ಕ್ಯಾಂಡಿ (ಶ್ರೀಲಂಕಾ): ಭಾರತ ಮತ್ತು ಪಾಕಿಸ್ತನ ನಡುವಣ ಏಷ್ಯಾಕಪ್ ಪಂದ್ಯ ಒಂದು ಇನ್ನಿಂಗ್ಸ್ನ್ನು ಮಾತ್ರ ಕಂಡಿತು. ಪಾಕಿಸ್ತಾನದ ಬ್ಯಾಟಿಂಗ್ಗೆ ಅವಕಾಶವೇ ಸಿಗದಂತೆ ಸುರಿದ ಮಳೆಯ ಕಾರಣ ಪಂದ್ಯವನ್ನು ರದ್ದು ಮಾಡಲಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 267 ರನ್ನ ಗುರಿಯನ್ನು ಪಾಕಿಸ್ತಾನಕ್ಕೆ ನೀಡಿತ್ತು. ಆದರೆ ಎರಡನೇ ಇನ್ನಿಂಗ್ಸ್ಗೆ ವರುಣ ಅವಕಾಶವನ್ನೇ ನೀಡಲಿಲ್ಲ.
ಪಾಕಿಸ್ತಾನದ ಸ್ಟಾರ್ ಬೌಲರ್ಗಳಾದ ಶಾಹೀನ್ ಅಫ್ರಿದಿ, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ದಾಳಿಗೆ ಒಮ್ಮೆ ಭಾರತ ಬ್ಯಾಟಿಂಗ್ ಬಲ ನಲುಗಿದರೂ ನಂತರ ಪುಟಿದೆದ್ದು ಸ್ಪರ್ಧಾತ್ಮಕ ಗುರಿಯನ್ನು ಕಲೆಹಾಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಫಾರ್ಮ್ನಲ್ಲಿರುವ ಇಶಾನ್ ಕಿಶನ್ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಭಾರತಕ್ಕೆ ಆಸರೆಯಾಗಿ ನಿಂತರು. ಈ ಜೋಡಿ 138 ರನ್ ಜೊತೆಯಾಟವನ್ನೂ ಮಾಡಿತು. ಈ ಜೊತೆಯಾಟದ ನೆರವಿನಿಂದ ಭಾರತ 250 ಗಡಿ ದಾಟಿತು. ದುರಾದೃಷ್ಟವಶಾತ್ ಈ ಇಬ್ಬರು ಬ್ಯಾಟರ್ಗಳು ಶತಕ ಗಳಿಸುವಲ್ಲಿ ಎಡವಿದರು.
ಆದರೂ 66 ರನ್ಗೆ 4 ವಿಕೆಟ್ ಕಳೆದುಕೊಂಡು 100 ಗಡಿ ದಾಟುವುದು ಅನುಮಾನ ಎಂಬಂತಿದ್ದ ಕ್ಷಣವನ್ನು ಇಬ್ಬರು ಬದಲಾಯಿಸಿ 200 ಗಡಿ ದಾಟಿಸಿದ್ದರು. ತಂಡ 204 ರನ್ ಗಳಸಿದ್ದಾಗ 82 ರನ್ ಗಳಿಸಿದ್ದ ಇಶಾನ್ ಕಿಶನ್ ವಿಕೆಟ್ ಪತನ ಆಗುವ ಮೂಲಕ 18 ರನ್ನಿಂದ ಅವರ ಶತಕ ತಪ್ಪಿದರೆ, ನೂರು ರನ್ ಮೀರಿ ಬೆಳೆದಿದ್ದ ಜೊತೆಯಾಟವೂ ಅಂತ್ಯವಾಗಿತ್ತು. ಕಿಶನ್ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ವಿಕೆಟ್ ಸಹ ಪತನವಾಯಿತು. 87 ರನ್ ಗಳಿಸಿ ಶತಕಕ್ಕೆ ಇನ್ನು 13 ರನ್ ಬಾಕಿ ಇದ್ದಾಗ ಉಪನಾಯಕ ಸಹ ವಿಕೆಟ್ ಒಪ್ಪಿಸಿದರು. 300 ಗಡಿ ತಲುಪುವ ಅಂದಾಜು ಅಲ್ಲಿಂದ ಕೈತಪ್ಪಿತು. ಈ ಎರಡು ವಿಕೆಟ್ನ ನಂತರ ಕೊನೆಯ 4 ವಿಕೆಟ್ಗೆ ಭಾರತ ಕೇವಲ 27 ರನ್ ಕಲೆಹಾಕಿತು. 7 ಮತ್ತು 8ನೇ ವಿಕೆಟ್ನಲ್ಲಿ ಆಲ್ರೌಂಡರ್ಗಳಿದ್ದರೂ ಸಮರ್ಥ ಪ್ರದರ್ಶನ ಕಾಣಲಿಲ್ಲ.