ಕರ್ನಾಟಕ

karnataka

ETV Bharat / sports

ಟಿ20 ಕ್ರಿಕೆಟ್​ಗೆ ಇಂಗ್ಲೆಂಡ್​ ಕಿಂಗ್​.. ಪಾಕ್​ ಪುಡಿಗಟ್ಟಿ ಚಾಂಪಿಯನ್​ - England win against Pakistan

ಪಾಕಿಸ್ತಾನದ ರಕ್ಕಸ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ ಇಂಗ್ಲೆಂಡ್​ ದಾಂಡಿಗರು ಟಿ20 ವಿಶ್ವಕಪ್​ ಚಾಂಪಿಯನ್​ ಆಗಿ ಹೊರಹೊಮ್ಮಿದರು.

pakistan-vs-england-final-match-report
ಟಿ20 ಕ್ರಿಕೆಟ್​ಗೆ ಇಂಗ್ಲೆಂಡ್​ ಕಿಂಗ್​

By

Published : Nov 13, 2022, 5:12 PM IST

Updated : Nov 13, 2022, 10:36 PM IST

ಮೆಲ್ಬೋರ್ನ್​(ಆಸ್ಟ್ರೇಲಿಯಾ):ಪಾಕಿಸ್ತಾನದ ರಕ್ಕಸ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ ಇಂಗ್ಲೆಂಡ್​ ದಾಂಡಿಗರು ಟಿ20 ವಿಶ್ವಕಪ್​ ಚಾಂಪಿಯನ್​ ಆಗಿ ಹೊರಹೊಮ್ಮಿದರು. 2019 ರ ಏಕದಿನ ವಿಶ್ವಕಪ್​ ಗೆದ್ದಿದ್ದ ತಂಡ ಐಸಿಸಿಯ ಇನ್ನೊಂದು ವಿಶ್ವ ಕಪ್ ಅನ್ನು ಮುಡಿಗೇರಿಸಿಕೊಂಡಿದೆ. ವಿಶ್ವ ಕ್ರಿಕೆಟ್​ಗೆ ತಾನು ಕಿಂಗ್​ ಯಾಕೆ ಎಂಬುದನ್ನು ಇಂಗ್ಲೆಂಡ್​ ತೋರಿಸಿಕೊಟ್ಟಿದೆ. ಆಂಗ್ಲರ ವಿರುದ್ಧ ಸೋತ ಪಾಕಿಸ್ತಾನ ರನ್ನರ್​ ಅಪ್​ ಪ್ರಶಸ್ತಿಗೆ ತೃಪ್ತಿಪಟ್ಟಿಕೊಳ್ಳಬೇಕಾಯಿತು.

ಮೊದಲು ಬ್ಯಾಟ್​ ಮಾಡಿ ಪಾಕಿಸ್ತಾನ ನೀಡಿದ 137 ರನ್​ಗಳ ಸಾಧಾರಣ ಮೊತ್ತವನ್ನು ಬೆನ್​ಸ್ಟೋಕ್ಸ್​ರ ಹೋರಾಟದ ಅರ್ಧಶತಕದಿಂದ ಇಂಗ್ಲೆಂಡ್​ 19 ಓವರ್​ಗಳಲ್ಲಿ ಮುಟ್ಟಿತು. ಪಾಕಿಸ್ತಾನದ ವೇಗದ ದಾಳಿಯನ್ನು ತಡೆದು ಕೆಚ್ಚೆದೆಯ ಬ್ಯಾಟ್​ ಬೀಸಿದ ಸ್ಟೋಕ್ಸ್​ 2019 ರ ಫೈನಲ್​ ಪಂದ್ಯವನ್ನು ಮರುಕಳಿಸುವಂತೆ ಆಟವಾಡಿದರು.

ಬಿಗಿ ದಾಳಿಗೆ ಬೆದರದ ಆಂಗ್ಲರು:ಪಾಕಿಸ್ತಾನ ತಂಡದ ಶಕ್ತಿಯೇ ಅದರ ಬೌಲಿಂಗ್​. ಗಂಟೆಗೆ 150 ರ ವೇಗದಲ್ಲಿ ದಾಳಿ ಮಾಡುವ ಪಾಕ್​ ಬೌಲರ್​ಗಳು ಇಂಗ್ಲೆಂಡ್​ ತಂಡವನ್ನು ಕೆಲಹೊತ್ತು ಕಾಡಿದರು. ಶಾಹೀನ್​ ಆಫ್ರಿದಿ, ನಸೀಮ್​ ಶಾ, ಹ್ಯಾರೀಸ್​ ರೌಫ್​ ಮೊಹಮದ್​ ವಾಸಿಮ್​ ಜೂನಿಯರ್​ ವೇಗ ಆಂಗ್ಲರನ್ನು ತಬ್ಬಿಬ್ಬುಗೊಳಿಸಿತು.

ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ಗೆ ಆಫ್ರಿದಿ ಆರಂಭದಲ್ಲೇ ಪೆಟ್ಟು ನೀಡಿದರು. ಕಳೆದ ಪಂದ್ಯದ ಹೀರೋ ಅಲೆಕ್ಸ್​ ಹೇಲ್ಸ್​ 1 ರನ್​ಗೆ ಕ್ಲೀನ್​ ಬೌಲ್ಡ್ ಆದರು. ನಾಯಕ ಜೋಸ್​ ಬಟ್ಲರ್​ 26, ಫಿಲಿಪ್​ ಸಾಲ್ಟ್​ 10 ಹ್ಯಾರಿ ಬ್ರೂಕ್ಸ್​ 20, ಮೊಯೀನ್​ ಅಲಿ 19 ರನ್​ ಗಳಿಸಿದರು.

ಬೆನ್​ ಸ್ಟೋಕ್ಸ್​ ಏಕಾಂಗಿ ಹೋರಾಟ:ಇಂಗ್ಲೆಂಡ್​ ತಂಡ ಟೂರ್ನಿಯಲ್ಲಿ ತನ್ನ ಖ್ಯಾತಿಗೆ ತಕ್ಕಂತೆ ಇನ್ನೂ ಆಟವಾಡಿಲ್ಲ ಎಂದು ಸೆಮಿಫೈನಲ್​ಗೂ ಮೊದಲು ತಂಡದ ತಾರಾ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಹೇಳಿಕೆ ನೀಡಿದ್ದರು. ಬಳಿಕ ಸೆಮಿಫೈನಲ್​ನಲ್ಲಿ ಭಾರತವನ್ನು ವಿಕೆಟ್​ ನಷ್ಟವಿಲ್ಲದೇ ಬಗ್ಗುಬಡಿದು ಫೈನಲ್​ ತಲುಪಿದ ಹೇಳಿಕೆ ನಿಜವಾಯಿತು.

ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಹೇಳಿಕೆಗೆ ತಕ್ಕ ಆಟವಾಡಿದ ಸ್ಟೋಕ್ಸ್​ 5 ಬೌಂಡರಿ 1 ಸಿಕ್ಸರ್​ ಸಮೇತ ಹೋರಾಟ ನಡೆಸಿ ಔಟಾಗದೇ 52 ರನ್​ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. 2016 ರಲ್ಲಿ ಫೈನಲ್​ ತಲುಪಿದ್ದ ಇಂಗ್ಲೆಂಡ್​ಗೆ ಇದೇ ಬೆನ್​ ಸ್ಟೋಕ್ಸ್​ ಬೌಲಿಂಗ್​ ಮಾರಕವಾಗಿತ್ತು. ವೆಸ್ಟ್ ಇಂಡೀಸ್​ ಬ್ಯಾಟರ್​ ಬ್ರಾಥ್​ವೇಟ್​ ಸ್ಟೋಕ್ಸ್​ಗೆ ಸತತ ಸಿಕ್ಸರ್​ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿ ಕೆರೆಬಿಯನ್​ ತಂಡವನ್ನು ಚಾಂಪಿಯನ್​ ಮಾಡಿದ್ದರು.

ಅಂದಿನ ಸೋಲಿಗೆ ಕಾರಣವಾಗಿದ್ದ ಸ್ಟೋಕ್ಸ್​ ಇಂದಿನ ಫೈನಲ್​ ಪಂದ್ಯದಲ್ಲಿ ಏಕಾಂಗಿಯಾಗಿ ಬ್ಯಾಟ್​ ಮಾಡಿ ಪಂದ್ಯ ಗೆಲ್ಲಿಸಿಕೊಟ್ಟರು. ಇಂಗ್ಲೆಂಡ್​ ಒಂದು ಓವರ್​ ಬಾಕಿ ಇರುವಂತೆಯೇ 5 ವಿಕೆಟ್​ಗೆ 138 ರನ್​ ಗಳಿಸಿ ಜಯಭೇರಿ ಬಾರಿಸಿತು.

2 ನೇ ಬಾರಿಗೆ ಇಂಗ್ಲೆಂಡ್​ ಚಾಂಪಿಯನ್​:2010 ರಲ್ಲಿ ಟಿ20 ವಿಶ್ವಕಪ್​ ಗೆದ್ದಿದ್ದ ಇಂಗ್ಲೆಂಡ್​ 2ನೇ ಬಾರಿಗೆ ಚಾಂಪಿಯನ್​ ಆಯಿತು. ಅಂದು ಆಸ್ಟ್ರೇಲಿಯಾವನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದ ಆಂಗ್ಲರು, ಈ ಬಾರಿ ಪಾಕಿಸ್ತಾನಕ್ಕೆ ಡಿಚ್ಚಿ ಹೊಡೆದರು.

ಸ್ಯಾಮ್​ ಕರ್ರನ್​ ಸರಣಿಶ್ರೇಷ್ಠ ಆಟಗಾರ:ಇಂಗ್ಲೆಂಡ್​ ಪರವಾಗಿ ವಿಶ್ವಕಪ್​ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ಸ್ಯಾಮ್​ ಕರ್ರನ್​ ಫೈನಲ್​ ಪಂದ್ಯದ ಶ್ರೇಷ್ಠ ಪ್ರದರ್ಶನ ಪ್ರಶಸ್ತಿ ಮತ್ತು ವಿಶ್ವಕಪ್​ನ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಬಾಚಿಕೊಂಡರು. ಸ್ಯಾಮ್​ 13 ವಿಕೆಟ್​ ಕಬಳಿಸಿದ್ದಾರೆ.

ಪಾಕ್​ಗೆ ಹಿನ್ನಡೆಯಾದ ಆಫ್ರಿದಿ ಗಾಯ: ಪಂದ್ಯದ ವೇಳೆ ಬಾಲ್​​ ಹಿಡಿಯುವಾಗ ಕಾಲಿನ ಗಾಯಕ್ಕೆ ತುತ್ತಾದ ಪಾಕಿಸ್ತಾನದ ಸ್ಟಾರ್​ ಬೌಲರ್​ ಶಾಹೀನ್ ಆಫ್ರಿದಿ ಹೊರನಡೆದಿದ್ದು ತಂಡಕ್ಕೆ ಭಾರಿ ಹಿನ್ನಡೆ ಉಂಟು ಮಾಡಿತು. 2 ಓವರ್​ ಬೌಲಿಂಗ್​ ಮಾಡಿದ್ದ ಶಾಹೀನ್ ಗಾಯದ ಮಧ್ಯೆಯೂ ಬೌಲ್​ ಮಾಡಲು ಆಗಮಿಸಿ ಬಳಿಕ ನೋವು ತಡೆಯಲಾಗದೇ ಮೈದಾನದಿಂದ ಹೊರನಡೆದರು. ಇದನ್ನೇ ಬಳಸಿಕೊಂಡ ಇಂಗ್ಲೆಂಡ್​ ಅರೆಕಾಲಿಕ ಬೌಲರ್​ ಇಫ್ತಿಕಾರ್​ ಓವರ್​ನಲ್ಲಿ ರನ್​ ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಓದಿ:ಟಿ20 ವಿಶ್ವಕಪ್ ಫೈನಲ್: ಟಾಸ್​ ಗೆದ್ದು ಪಾಕಿಸ್ತಾನಕ್ಕೆ ಬ್ಯಾಟಿಂಗ್ ಆಹ್ವಾನಿಸಿದ ಇಂಗ್ಲೆಂಡ್

Last Updated : Nov 13, 2022, 10:36 PM IST

ABOUT THE AUTHOR

...view details