ಲಾಹೋರ್ (ಪಾಕಿಸ್ತಾನ): ಪಾಕಿಸ್ತಾನದ ಬಲಿಷ್ಠ ಬೌಲಿಂಗ್ ಎದುರು ಬಾಂಗ್ಲಾದೇಶ ಬ್ಯಾಟರ್ಗಳು ಮಂಡಿಯೂರಿದ್ದಾರೆ. ಹ್ಯಾರಿಸ್ ರೌಫ್ ನಾಲ್ಕು ಮತ್ತು ನಸೀಮ್ ಶಾ 3 ವಿಕೆಟ್ ಪಡೆದು ಬಾಂಗ್ಲಾ ಟೈಗರ್ಸ್ ಅನ್ನು ಕಟ್ಟಿಹಾಕಿದರು. ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಮತ್ತು ಮುಶ್ಫಿಕರ್ ರಹೀಮ್ ಅರ್ಧಶತಕ ಗಳಿಸಿದ್ದು ಬಿಟ್ಟರೆ ಮತ್ತಾವ ಬ್ಯಾಟರ್ಗಳು ರನ್ ಕಲೆಹಾಕಲಿಲ್ಲ. ಬಾಂಗ್ಲಾದೇಶ 38.4 ಓವರ್ನಲ್ಲಿ 193 ರನ್ ಗಳಿಸಿ ಸರ್ವಪತನ ಕಂಡಿತು. ಬಲಿಷ್ಠ ಬ್ಯಾಟಿಂಗ್ ಹೊಂದಿರುವ ಪಾಕಿಸ್ತಾನಕ್ಕೆ 194 ರನ್ನ ಗುರಿ ಸುಲಭ ತುತ್ತಾಗಿದೆ. ಇದನ್ನು ಬಾಂಗ್ಲಾ ಬೌಲರ್ಗಳು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದು ಕುತೂಹಲಕರವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶಕೀಬ್ ಅಲ್ ಹಸನ್ ನಿರ್ಧಾರವನ್ನು ಯಾವುದೇ ಬ್ಯಾಟರ್ಗಳು ಬೆಂಬಲಿಸಲಿಲ್ಲ. ಮೊದಲ ಓವರ್ ಮೆಡಿನ್ ಆದರೆ, ಎರಡನೇ ಓವರ್ನ ಮೊದಲ ಬಾಲ್ನಲ್ಲಿ ನಸೀಮ್ ಶಾಗೆ ಮೆಹಿದಿ ಹಸನ್ ಮಿರಾಜ್ ವಿಕೆಟ್ ಒಪ್ಪಿಸಿದರು. ಪಂದ್ಯದಲ್ಲಿ ಮೊದಲು ಪಾಕಿಸ್ತಾನ ವಿಕೆಟ್ನ ಖಾತೆ ತೆರೆಯಿತು. ಶಾಂಟೋ ಬದಲಾಗಿ ತಂಡದಲ್ಲಿ ಸ್ಥಾನ ಪಡೆದ ಲಿಟ್ಟನ್ ದಾಸ್ ಪಾಕ್ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿ 3 ಬೌಂಡರಿಯಿಂದ 16ರನ್ ಕಲೆಹಾಕಿದ್ದರು. ಆದರೆ, ಅಫ್ರಿದಿಯ ಬೌಲ್ನಲ್ಲಿ ಬೌಂಡರಿಗಳಿಸುವ ಓಘದಲ್ಲಿ ಕ್ಯಾಚ್ ಕೊಟ್ಟು ಪೆವಿಲಿಯನ್ಗೆ ನಡೆದರು.
ಆರಂಭಿಕ ಮೊಹಮ್ಮದ್ ನಯಿಮ್ ತಾಳ್ಮೆಯಿಂದ ಪಾಕ್ ಬೌಲರ್ಗಳನ್ನು ಎದುರಿಸುತ್ತಿದ್ದರು. ಆದರೆ, ರೌಫ್ ಬೌಲಿಂಗ್ನಲ್ಲಿ 20 ರನ್ ಗಳಿಸಿ ಆಡುತ್ತಿದ್ದ ನಯಿಮ್ ಸಹ ಕ್ಯಾಚ್ ಇತ್ತರು. ತೌಹಿದ್ ಹೃದಯೋಯ್ 2 ರನ್ಗೆ ವಿಕೆಟ್ ಕೊಟ್ಟರು. ನಾಯಕ ಶಕೀಬ್ ಅಲ್ ಹಸನ್ ಅರ್ಧಶತಕದ ಗಳಿಸಿ ತಂಡಕ್ಕೆ ರನ್ ಹೆಚ್ಚಿಸಿದರು. ಆದರೆ, 53 ರನ್ಗಳನ್ನು ಗಳಿಸಿ ವಿಕೆಟ್ ಕೊಟ್ಟರು. ಮುಶ್ಫಿಕರ್ ರಹೀಮ್ ನಿಧಾನವಾಗಿ ತಂಡದ ಸ್ಕೋರ್ ಹೆಚ್ಚಿಸುತ್ತಾ ಬಂದರು. ಆದರೆ, ಅವರಿಗೆ ಯಾರು ಜೊತೆಯಾಟ ಆಡಲಿಲ್ಲ. ನಾಯಕ ಶಕೀಬ್ ಜೊತೆ 40 ರನ್ ಜಂಟಿ ರನ್ ಕಲೆಹಾಕಿದ್ದೇ ತಂಡದ ಬೃಹತ್ ಜೊತೆಯಾಟವಾಗಿದೆ.