ಅಮೃತಸರ (ಪಂಜಾಬ್): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ನಂತರ ಅಮೃತಸರದ ಅಟ್ಟಾರಿ - ವಾಘಾ ಗಡಿಗೆ ಇಂದು (ಬುಧವಾರ) ಆಗಮಿಸಿದರು. ಲಾಹೋರ್‌ನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಪಂದ್ಯಗಳಿಗೆ ಹಾಜರಾಗಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ಮತ್ತು ಇತರ ಕ್ರಿಕೆಟ್ ಮಂಡಳಿಗಳ ಸದಸ್ಯರಿಗೆ ಆಹ್ವಾನ ನೀಡಿದ ನಂತರ ಬಿನ್ನಿ ಮತ್ತು ಶುಕ್ಲಾ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ನಡೆದ ಭೋಜನಕೂಟದಲ್ಲಿ ಅವರು ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳ ಆಟಗಾರರನ್ನು ಭೇಟಿಯಾದರು.
ಪ್ರವಾಸದ ಬಗ್ಗೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ್ಯ ಬಿನ್ನಿ,"ನಾವು ಪಾಕಿಸ್ತಾನದಲ್ಲಿ ಬಹಳ ಒಳ್ಳೆಯ ಸಭೆಯನ್ನು ನಡೆಸಿದ್ದೇವೆ. ನಾವು ಉತ್ತಮ ಆತಿಥ್ಯವನ್ನು ಸ್ವೀಕರಿಸಿದ್ದೇವೆ. ಅವರು ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಮುಖ್ಯ ಅಜೆಂಡಾ ಕ್ರಿಕೆಟ್ ನೋಡುವುದು ಮತ್ತು ಅವರೊಂದಿಗೆ ಕುಳಿತು ವಿಷಯಗಳನ್ನು ಚರ್ಚಿಸುವುದು. ಒಟ್ಟಾರೆ, ಇದು ತುಂಬಾ ಒಳ್ಳೆಯ ಪ್ರವಾಸವಾಗಿತ್ತು. ಪಾಕಿಸ್ತಾನ ನಮ್ಮನ್ನು ಚೆನ್ನಾಗಿ ನಡೆಸಿಕೊಂಡಿತು" ಎಂದು ತಿಳಿಸಿದರು.
"ಇದು ಎರಡು ದಿನಗಳ ಭೇಟಿ ಮತ್ತು ಉತ್ತಮ ಭೇಟಿಯಾಗಿದೆ. ರಾಜ್ಯಪಾಲರು ನಮ್ಮ ಗೌರವಾರ್ಥ ಔತಣಕೂಟವನ್ನು ಏರ್ಪಡಿಸಿದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆತಿಥ್ಯವೂ ಚೆನ್ನಾಗಿತ್ತು. ಉಭಯ ದೇಶಗಳ ನಡುವಿನ ಕ್ರಿಕೆಟ್ ಅನ್ನು ಪುನರಾರಂಭಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು, ನಾವು ಇದನ್ನು ಸರ್ಕಾರದ ಮುಂದಿಡುತ್ತೇವೆ ಮತ್ತು ನಮ್ಮ ಸರ್ಕಾರ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಇದು ಕ್ರಿಕೆಟ್ ಭೇಟಿ ಮತ್ತು ಯಾವುದೇ ರಾಜಕೀಯ ಅಜೆಂಡಾ ಇರಲಿಲ್ಲ" ಎಂದು ಶುಕ್ಲಾ ಹೇಳಿದರು.