ನವದೆಹಲಿ: ಭಾರತ ಆತಿಥ್ಯ ವಹಿಸಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಅತ್ಯಂತ ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುವುದು ಅನುಮಾನ ಎಂಬಂತಾಗಿದೆ. ಶನಿವಾರ, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು 2023 ರ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡದ ಭಾಗವಹಿಸುವಿಕೆಯ ಬಗ್ಗೆ ನಿರ್ಧರಿಸಲು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ. ಇದೀಗ ಭಾನುವಾರ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಪಾಕಿಸ್ತಾನದ ಕ್ರೀಡಾ ಸಚಿವ ಅಹ್ಸಾನ್ ಮಜಾರಿ ಭಾರತಕ್ಕೆ ಹೋಗಿ ಆಡುವ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಹ್ಸಾನ್ ಮಜಾರಿ,"ನನ್ನ ವೈಯಕ್ತಿಕ ಅಭಿಪ್ರಾಯ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ನನ್ನ ಸಚಿವಾಲಯದ ಅಡಿಯಲ್ಲಿ ಬರುವುದರಿಂದ, ಭಾರತವು ತಮ್ಮ ಏಷ್ಯಾಕಪ್ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಬೇಕೆಂದು ಒತ್ತಾಯಿಸಿದರೆ, ನಾವು ಭಾರತದಲ್ಲಿನ ನಮ್ಮ ವಿಶ್ವಕಪ್ ಪಂದ್ಯಗಳಿಗೂ ಅದೇ ಬೇಡಿಕೆಯನ್ನು ಇಡುತ್ತೇವೆ. ಸಮಿತಿಯ ನೇತೃತ್ವವನ್ನು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ವಹಿಸಲಿದ್ದಾರೆ. ಆ ಸಮಿತಿಯಲ್ಲಿ ಭಾಗವಾಗಿರುವ 11 ಸಚಿವರಲ್ಲಿ ನಾನಿದ್ದೇನೆ. ನಾವು ಸಮಸ್ಯೆ ಕುರಿತು ಚರ್ಚಿಸುತ್ತೇವೆ ಮತ್ತು ಪಿಸಿಬಿಯ ಪೋಷಕ-ಮುಖ್ಯಸ್ಥರೂ ಆಗಿರುವ ಪ್ರಧಾನಿಗೆ ನಮ್ಮ ಶಿಫಾರಸುಗಳನ್ನು ನೀಡುತ್ತೇವೆ. ಪ್ರಧಾನಮಂತ್ರಿಯವರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದಿದ್ದಾರೆ.
"ಪಾಕಿಸ್ತಾನ ಆತಿಥ್ಯ ವಹಿಸುತ್ತದೆ, ಪಾಕಿಸ್ತಾನದಲ್ಲಿ ಎಲ್ಲಾ ಪಂದ್ಯಗಳನ್ನು ನಡೆಸುವ ಹಕ್ಕಿದೆ. ಕ್ರಿಕೆಟ್ ಪ್ರೇಮಿಗಳು ಬಯಸುವುದು ಅದನ್ನೇ, ನನಗೆ ಹೈಬ್ರಿಡ್ ಮಾದರಿ ಬೇಡ" ಎಂದು ಅವರು ಏಷ್ಯಾಕಪ್ನ ಬಗ್ಗೆ ಮಾತನಾಡಿದರು.