ಲಾಹೋರ್ (ಪಾಕಿಸ್ತಾನ): ಐಸಿಸಿ ಏಕದಿನ ವಿಶ್ವಕಪ್ 2023ಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಏಷ್ಯಾ ಕಪ್ನಲ್ಲಿ ಗಾಯಕ್ಕೆ ತುತ್ತಾಗಿದ್ದ ಬೌಲರ್ ನಸೀಮ್ ಶಾ ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಶಾ ಬದಲಾಗಿ ಹಸನ್ ಅಲಿ ತಂಡಕ್ಕೆ ಸೇರಿಕೊಂಡಿದ್ದಾರೆ. ಹಸನ್ ಅಲಿ ಕೊನೆಯದಾಗಿ 2022ರಲ್ಲಿ ಏಕದಿನ ಪಂದ್ಯವನ್ನಾಡಿದ್ದರು. ಅಲಿ ಜೊತೆ ಪಾಕ್ನ ವೇಗದ ಬೌಲಿಂಗ್ ವಿಭಾಗದಲ್ಲಿ ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ ಕಾಣಿಸಿಕೊಳ್ಳಲಿದ್ದಾರೆ.
ಪಾಕ್ ತಂಡದ ಮುಖ್ಯ ಆಯ್ಕೆಗಾರ ಇಂಜಮಾಮ್-ಉಲ್-ಹಕ್ ಇಂದು ತಂಡವನ್ನು ಘೋಷಿಸಿದ್ದಾರೆ. ಏಷ್ಯಾ ಕಪ್ ವೇಳೆ ಭಾರತ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ ಭುಜದ ಗಾಯಕ್ಕೆ ಒಳಗಾದ ನಸೀಮ್ ಈ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಕಾರ, ಸಂಪೂರ್ಣ ವೈದ್ಯಕೀಯ ಪರೀಕ್ಷೆ ಮತ್ತು ಪ್ರಮುಖ ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚಿಸಿ ಮೂರರಿಂದ ನಾಲ್ಕು ತಿಂಗಳ ಚೇತರಿಕೆಯ ಅವಧಿಯೊಂದಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅವರಿಗೆ ಸಲಹೆ ನೀಡಲಾಗಿದೆ.
ಗಾಯಗೊಂಡಿರುವ ನಸೀಮ್ ತಂಡದಿಂದ ಹೊರಗುಳಿಯಬೇಕಾಗಿದೆ. ಇತ್ತೀಚಿನ ಏಷ್ಯಾ ಕಪ್ನಲ್ಲಿ ಕೆಲವರು ಗಾಯಕ್ಕೆ ತುತ್ತಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಆದರೆ, ಈಗ ಉಳಿದ ಆಟಗಾರರು ಚೇತರಿಸಿಕೊಂಡಿದ್ದಾರೆ. ಹ್ಯಾರಿಸ್ ರೌಫ್ ಸಹ ಚೇತರಿಸಿಕೊಂಡಿದ್ದಾರೆ. ರೌಫ್ ಬಗ್ಗೆ ನಮ್ಮ ವೈದ್ಯಕೀಯ ಸಮಿತಿಯಿಂದ ನನಗೆ ಸಕಾರಾತ್ಮಕ ವರದಿ ಬಂದಿದೆ. ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಆರಂಭಿಸಿದ್ದು, ಲಭ್ಯರಾಗಲಿದ್ದಾರೆ ಎಂದು ಮುಖ್ಯ ಆಯ್ಕೆಗಾರ ಇಂಜಮಾಮ್ ತಿಳಿಸಿದ್ದಾರೆ.