ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿಶ್ವಕಪ್ನಲ್ಲಿ ಪಾಕಿಸ್ತಾನ ಇನ್ನುಳಿದಿರುವ ಎಲ್ಲಾ ಪಂದ್ಯಗಳನ್ನೂ ಗೆದ್ದರೂ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಿಲ್ಲ. ಅಂಕಪಟ್ಟಿಯಲ್ಲಿ ಪಾಕ್ಕ್ಕಿಂತ ಮೇಲಿರುವ ತಂಡಗಳಿಗೆ ಒಂದೆರಡು ಸೋಲಾದರೆ ಮಾತ್ರ ಸೆಮೀಸ್ ಪ್ರವೇಶ ಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನದ ಈ ದುಸ್ಥಿತಿಗೆ ಭಾರತದ ಪರಿಸ್ಥಿತಿಗಳು ಕಾರಣ ಎಂದು ಆ ತಂಡದ ಮುಖ್ಯ ಕೋಚ್ ಗ್ರಾಂಟ್ ಬ್ರಾಡ್‌ಬರ್ನ್ ತಿಳಿಸಿದರು.
ಪಾಕಿಸ್ತಾನ ಮತ್ತೆ "ಕುಣಿಯಲಾರದವಳಿಗೆ ನೆಲ ಡೊಂಕು" ಎಂಬ ಗಾದೆಯಂತೆ ತನ್ನ ಹೇಳಿಕೆ ನೀಡಿದೆ. ವಿಶ್ವಕಪ್ ಪಂದ್ಯಗಳಲ್ಲಿ ಸತತ ನಾಲ್ಕು ಸೋಲು ಕಾಣಲು ಭಾರತದ ಪರಿಸ್ಥಿತಿಗಳು ಕಾರಣ. ಭಾರತೀಯ ಪರಿಸ್ಥಿತಿಗಳು ಮತ್ತು ಸ್ಥಳಗಳ ಪರಿಚಯದ ಕೊರತೆಯಿಂದ ಉತ್ತಮ ಪ್ರದರ್ಶನ ನೀಡಲು ಆಗುತ್ತಿಲ್ಲ ಎಂದು ಕೋಚ್ ಕಳಪೆ ಪ್ರದರ್ಶನಕ್ಕೆ ಸಮಜಾಯಿಷಿ ನೀಡಿದ್ದಾರೆ.
ನಾಳೆ (ಅ.31 ಮಂಗಳವಾರ) ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನ ಮಾತನಾಡಿದ ಅವರು, "ನಾವು ಈ ರೀತಿಯ ಪರಿಸ್ಥಿತಿಯನ್ನು ಬಯಸಿರಲಿಲ್ಲ. ವಿಶ್ವಕಪ್ನಲ್ಲಿ ತಂಡದ ಪ್ರದರ್ಶನದ ಬಗ್ಗೆ ಎಲ್ಲರಿಗೂ ಬೇಸರವಿದೆ. ಭಾರತದ ಪರಿಸ್ಥಿತಿಯಲ್ಲಿ ನಾವು ಯಾವುದೇ ಪಂದ್ಯವನ್ನು ಆಡಿಲ್ಲ. ಎಲ್ಲಾ ಸ್ಥಳಗಳು ಆಟಗಾರರಿಗೆ ಹೊಸದು. ತಂಡ ಯಾವುದೇ ಎದುರಾಳಿಯ ಮೇಲೆ ಜಯ ದಾಖಲಿಸುವಷ್ಟು ಬಲಿಷ್ಠವಾಗಿದೆ. ಎಲ್ಲಾ ಆಟಗಾರರು ಅವರ ಪಾತ್ರವನ್ನು ಸರಿಯಾಗಿಯೇ ನಿಭಾಯಿಸುತ್ತಿದ್ದಾರೆ" ಎಂದರು.