ಮುಲ್ತಾನ್(ಪಾಕಿಸ್ತಾನ): ಪ್ರವಾಸಿ ನ್ಯೂಜಿಲ್ಯಾಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಲು ಕೆಲ ನಿಮಿಷ ಬಾಕಿ ಇರುವಾಗಲೇ ಸರಣಿ ರದ್ಧು ಮಾಡುವುದಾಗಿ ಕಿವೀಸ್ ಕ್ರಿಕೆಟ್ ಮಂಡಳಿ ಘೋಷಣೆ ಮಾಡಿತ್ತು. ಈ ನಿರ್ಧಾರಕ್ಕೆ ಈಗಾಗಲೇ ಪಿಸಿಬಿ ಸೇರಿದಂತೆ ಅನೇಕ ಪಾಕ್ ಕ್ರಿಕೆಟರ್ಸ್ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಪಾಕ್ ಕ್ರಿಕೆಟ್ ಮಂಡಳಿ ಮಾಜಿ ಆಯ್ಕೆಗಾರ ಇಂಜಮಾಮ್ ಉಲ್ ಹಕ್ ಕೂಡ ವಾಗ್ದಾಳಿ ನಡೆಸಿದ್ದಾರೆ.
2016ರಿಂದ 2019ರವರೆಗೆ ಪಾಕಿಸ್ತಾನ ಕ್ರಿಕೆಟ್ನ ಮುಖ್ಯ ಆಯ್ಕೆಗಾರನಾಗಿ ಸೇವೆ ಸಲ್ಲಿಸಿರುವ ಇಂಜ್ಮಾಮ್ ಹಕ್, ಈ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಧ್ಯಸ್ಥಿಕೆ ವಹಿಸುವಂತೆ ಕರೆ ನೀಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ನ್ಯೂಜಿಲ್ಯಾಂಡ್ ಆಟಗಾರರಿಗೆ ಎಲ್ಲ ರೀತಿಯ ಭದ್ರತೆ ಒದಗಿಸಿತ್ತು. ಈ ರೀತಿಯಾಗಿ ಬೇರೆ ಯಾವುದೇ ದೇಶ ಮಾಡಲು ಸಾಧ್ಯವಿಲ್ಲ. ಅವರಿಗೆ ಬೇರೆ ಯಾವುದೇ ಸಮಸ್ಯೆಗಳಿದ್ದರೆ ಪಾಕ್ ಕ್ರಿಕೆಟ್ ಮಂಡಳಿ ಜೊತೆ ಮಾತನಾಡಬೇಕಿತ್ತು. ಮತ್ತಷ್ಟು ಭದ್ರತೆ ಒದಗಿಸಲು ಕ್ರಮ ಕೈಗೊಳ್ಳುತ್ತಿತ್ತು. 2009ರಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ದಾಳಿ ನಡೆದ ನಂತರ, ಇಲ್ಲಿಗೆ ಭೇಟಿ ನೀಡುತ್ತಿರುವ ಎಲ್ಲ ರಾಷ್ಟ್ರಗಳಿಗೆ ನಾವು ಹೆಚ್ಚಿನ ಭದ್ರತೆ ನೀಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.