ಲಾಹೋರ್ (ಪಾಕಿಸ್ತಾನ): 2023ರ ವಿಶ್ವಕಪ್ನ ನಂತರ ಪಾಕಿಸ್ತಾನ ಕ್ರಿಕೆಟ್ನಲ್ಲಿ ಹಲವಾರು ಬದಲಾವಣೆಗಳಾಗಿದೆ. ತಂಡದ ನಾಯಕತ್ವದಿಂದ ಹಿಡಿದು ಕೋಚ್ವರೆಗೂ ಎಲ್ಲವೂ ಬದಲಾಗಿದೆ. ಈಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಜಿ ಆಟಗಾರರಾದ ಉಮರ್ ಗುಲ್ ಮತ್ತು ಸಯೀದ್ ಅಜ್ಮಲ್ ಅವರನ್ನು ಕ್ರಮವಾಗಿ ಪುರುಷರ ರಾಷ್ಟ್ರೀಯ ತಂಡಕ್ಕೆ ವೇಗದ ಬೌಲಿಂಗ್ ಮತ್ತು ಸ್ಪಿನ್ ಬೌಲಿಂಗ್ ಕೋಚ್‌ಗಳಾಗಿ ಹೊಸ ನೇಮಕ ಮಾಡಿದೆ.
ಹೊಸದಾಗಿ ನೇಮಕಗೊಂಡ ಬೌಲಿಂಗ್ ಕೋಚ್‌ಗಳು ಡಿಸೆಂಬರ್ 14, 2023 ರಿಂದ ಜನವರಿ 7, 2024 ರವರೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮತ್ತು 2024 ಜನವರಿ 12 ರಿಂದ 21ರವರೆಗೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮೊರ್ನೆ ಮೊರ್ಕೆಲ್ ಪಾಕ್ ಬೌಲಿಂಗ್ ಕೋಚ್ ಆಗಿದ್ದರು. ವಿಶ್ವಕಪ್ ನಂತರ ಹುದ್ದೆಗೆ ರಾಜಿನಾಮೆ ನೀಡಿದರು.
2023ರ ಏಷ್ಯಾಕಪ್ ಮತ್ತು ವಿಶ್ವಕಪ್ನ ಕಳಪೆ ಪ್ರದರ್ಶನದ ನಂತರ ಪಿಸಿಬಿ ತಂಡದ ಸಂಪೂರ್ಣ ನಿರ್ವಹಣೆ ಮತ್ತು ಕೋಚಿಂಗ್ ಸಿಬ್ಬಂದಿ ಬದಲಾಯಿಸಿದೆ. ಮೊಹಮ್ಮದ್ ಹಫೀಜ್ ತಂಡದ ನಿರ್ದೇಶಕರಾಗಿ ಮತ್ತು ಮುಖ್ಯ ಕೋಚ್ ಆಗಿದ್ದಾರೆ. ವಹಾಬ್ ರಿಯಾಜ್ ಮುಖ್ಯ ಆಯ್ಕೆಗಾರರಾಗಿ ಮತ್ತು ಶಾನ್ ಮಸೂದ್ ಟೆಸ್ಟ್, ಶಾಹೀನ್ ಅಫ್ರಿದಿ ಟಿ20 ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
2003 ರಿಂದ 2016ರ ನಡುವೆ 47 ಟೆಸ್ಟ್‌ಗಳು ಮತ್ತು 130 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿರುವ ಗುಲ್, ಈ ಹಿಂದೆ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಸಮಯದಲ್ಲಿ ಮತ್ತು ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ನಂತರದ ಸರಣಿಯಲ್ಲಿ ಪುರುಷರ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಗುಲ್ ಕಳೆದ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್) ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್‌ಗೆ ಬೌಲಿಂಗ್ ಕೋಚ್ ಆಗಿದ್ದರು ಮತ್ತು 2022ರ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ವೇಳೆ ಅಫ್ಘಾನಿಸ್ತಾನದ ಬೌಲಿಂಗ್ ಕೋಚ್ ಆಗಿದ್ದರು.