ಸಿಡ್ನಿ (ಮೆಲ್ಬೋರ್ನ್):ಟಿ20 ವಿಶ್ವಕಪ್ಗೆ ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನಕ್ಕೆ ಆಘಾತವಾಗಿದೆ. ಇದೇ ಅಕ್ಟೋಬರ್ 23 ರಂದು ಪಾಕಿಸ್ತಾನವು ಭಾರತದ ವಿರುದ್ಧ ಕಣಕ್ಕಿಳಿಯಲಿದ್ದು ಈ ಪಂದ್ಯಕ್ಕೂ ಮುನ್ನ ದೊಡ್ಡ ಪೆಟ್ಟು ಬಿದ್ದಿದೆ.
ಇಂದು (ಶುಕ್ರವಾರ) ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಅಗ್ರ ಕ್ರಮಾಂಕದ ಬ್ಯಾಟರ್ ಶಾನ್ ಮಸೂದ್ ತಲೆಗೆ ಬಲವಾದ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಮೊದಲೇ ಗಾಯ ಹಾಗೂ ಇತರೆ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಪಾಕ್‌ಗೆ ಈ ಘಟನೆ ತಲೆಬಿಸಿ ತಂದಿದೆ. ಇದಕ್ಕೂ ಮುನ್ನ ಇತ್ತೀಚೆಗೆ ತಂಡದ ಮತ್ತೊಬ್ಬ ಆಟಗಾರ ಗಾಯಗೊಂಡಿದ್ದರು.
ನೆಟ್ ಪ್ರಾಕ್ಟಿಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ನವಾಜ್ ತಮ್ಮ ಬ್ಯಾಟ್ನಿಂದ ಬಿರುಸಾಗಿ ಹೊಡೆದಿದ್ದು ಚೆಂಡು ನೇರವಾಗಿ ಮಸೂದ್ ತಲೆಯ ಬಲಭಾಗಕ್ಕೆ ಬಿದ್ದಿದೆ. ಇದರಿಂದ ಅವರು ಸ್ಥಳದಲ್ಲೇ ಕುಸಿದು ಬಿದ್ದರು. ಸ್ವಲ್ಪ ಹೊತ್ತು ಕದಲದೇ ಇದ್ದುದನ್ನು ಕಂಡು ಅಲ್ಲಿದ್ದ ಸಹ ಆಟಗಾರರು ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸದ್ಯ ವೈದ್ಯರು ಸ್ಕ್ಯಾನ್ ಮಾಡಿ ಪಾಕ್ನ ಹಿರಿಯ ಅಧಿಕಾರಿಗೆ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಈ ವರದಿ ಬಹಿರಂಗವಾಗಿಲ್ಲ.