ಕರಾಚಿ(ಪಾಕಿಸ್ತಾನ):ಮುಂದಿನ ತಿಂಗಳಿಂದ ಬಹುನಿರೀಕ್ಷಿತ ಟಿ-20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ.
ಈ ಪಂದ್ಯದ ಬಗ್ಗೆ ಈಗಿನಿಂದಲೇ ಅಭಿಮಾನಿಗಳಲ್ಲಿ ಕುತೂಹಲ ಮನೆಮಾಡಿದೆ. ಇದಕ್ಕೆ ಆಟಗಾರರು ಕೂಡಾ ಹೊರತಾಗಿಲ್ಲ. ಪಾಕ್ ತಂಡದ ಆಲ್ರೌಂಡರ್ ಹಸನ್ ಅಲಿ ಪ್ರತಿಕ್ರಿಯಿಸಿದ್ದು, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನಾವು ಭಾರತಕ್ಕೆ ಸೋಲುಣಿಸಿರುವ ರೀತಿಯಲ್ಲಿ ಈ ಸಲದ ವಿಶ್ವಕಪ್ ಪಂದ್ಯದಲ್ಲೂ ಸೋಲುಣಿಸುತ್ತೇವೆ ಎಂದು ಹೇಳಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಗೆಲುವಿನಿಂದ ನಾವು ಸ್ಫೂರ್ತಿ ಪಡೆಯಬಹುದು ಅನ್ನೋದು ಅಲಿ ಮಾತು.
ಇಲ್ಲಿಯವರೆಗೆ ಪಾಕ್ ತಂಡ ವಿಶ್ವಕಪ್ನ (ಏಕದಿನ, ಟಿ-20) ಯಾವುದೇ ಪಂದ್ಯಗಳಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿದ ಉದಾಹರಣೆ ಇಲ್ಲ. 2018ರಲ್ಲಿ ದುಬೈನಲ್ಲಿ ನಡೆದ ಏಷ್ಯಾಕಪ್ ಹಾಗೂ 2019ರಲ್ಲಿ ಮ್ಯಾಂಚೆಸ್ಟರ್ನಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲೂ ಪಾಕ್ ಸೋಲುಂಡಿದೆ.