ಇಸ್ಲಾಮಾಬಾದ್:ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮಾಜಿ ಅಧ್ಯಕ್ಷ ಝಾಕಾ ಅಶ್ರಫ್ 2012ರಲ್ಲಿ ಪಾಕ್ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ಆಟಗಾರರ ಜೊತೆ ಅವರ ಪತ್ನಿಯರನ್ನು ಯಾಕೆ ಜೊತೆಗೆ ಕಳುಹಿಸಲಾಗಿತ್ತು ಎಂಬ ಕುತೂಹಲಕರ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
2012ರಲ್ಲಿ ಭಾರತಕ್ಕೆ ಪಾಕ್ ತಂಡ ಪ್ರವಾಸ ಬಂದಾಗ ಆಟಗಾರರ ಜೊತೆ ಅವರ ಪತ್ನಿಯರೂ ಪ್ರವಾಸದ ಭಾಗವಾಗಿದ್ದರು. ಇದಕ್ಕೆ ಕಾರಣ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಆಗಿನ ಅಧ್ಯಕ್ಷರಾಗಿದ್ದ ಝಾಕಾ ಅಶ್ರಫ್. ಆಟಗಾರರ ಪತ್ನಿಯರು ಜೊತೆಗಿದ್ದ ರಹಸ್ಯವನ್ನು ಸ್ವತಃ ಅಶ್ರಫ್ ಅವರೇ ಸಂದರ್ಶನವೊಂದರಲ್ಲಿ ಉಸುರಿದ್ದಾರೆ.
'ಪಾಕ್ ಆಟಗಾರರ ಮೇಲೆ ನಿಗಾ ಇಡಲು ನಾನೇ ಅವರ ಪತ್ನಿಯರನ್ನು ಪ್ರವಾಸಕ್ಕೆ ಕರೆದೊಯ್ಯಲು ಅವಕಾಶ ಮಾಡಿಕೊಟ್ಟೆ. ಪತ್ನಿ ಜೊತೆಗಿದ್ದರೆ ಆಟಗಾರರು ತಪ್ಪು ಹೆಜ್ಜೆ ಇಡದಂತೆ ನೋಡಿಕೊಳ್ಳುತ್ತಾರೆ. ಇದರಿಂದ ವಿನಾಕಾರಣ ವಿವಾದ ಉಂಟಾಗುವುದನ್ನು ತಡೆಯಬಹುದು ಎಂಬುದು ನನ್ನ ದೂರದೃಷ್ಟಿಯಾಗಿತ್ತು ಎಂದು ತಮ್ಮ ಅಂದಿನ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದಾರೆ.