ನವದೆಹಲಿ: ಜುಲೈ 10, 2019, ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ, ಈ ದಿನವನ್ನು ಮರೆಯುವುದು ತುಂಬಾ ಕಷ್ಟ. ಇದು 125 ಕೋಟಿ ಭಾರತೀಯರ ಹೃದಯ ಒಡೆದ ದಿನ ಎಂದರೂ ತಪ್ಪಾಗದು. ವಿಶ್ವಕಪ್ 2019 ರ ಸೆಮಿಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿತ್ತು. ಟೀಂ ಇಂಡಿಯಾ ಗೆಲುವಿನತ್ತ ಸಾಗುತ್ತಿದ್ದಾಗ ಮಾರ್ಟಿನ್ ಗಪ್ಟಿಲ್ ಅವರ ಸ್ಕ್ವೇರ್ ಲೆಗ್‌ನಿಂದ ಮಾಡಿದ ಡೈರೆಕ್ಟ್ ಥ್ರೋ ವಿಕೆಟ್‌ಗೆ ಬಡಿದು ಎರಡನೇ ರನ್ ಪೂರ್ಣಗೊಳಿಸುವ ವೇಳೆ ಧೋನಿ ರನ್ ಔಟ್ ಆಗಿದ್ದರು.
ಗಪ್ಟಿಲ್ ಅವರ ಈ ನೇರ ಎಸೆತವನ್ನು ನೋಡಿ ಫೀಲ್ಡ್ ಅಂಪೈರ್‌ಗಳು ಕೂಡ ದಿಗ್ಭ್ರಮೆಗೊಂಡರು, ಲೆಗ್ ಅಂಪೈರ್ ರಿಚರ್ಡ್ ಕೆಟಲ್‌ಬರೋ ಕೂಡ ಅಚ್ಚರಿಗೆ ಒಳಗಾಗಿದ್ದರು. ಕೂಡಲೇ ಮೂರನೇ ಟಿವಿ ಅಂಪೈರ್ ನಿರ್ಣಯಕ್ಕೆ ರನ್ ಔಟ್ನ್ನು ಕೊಟ್ಟರು. ಏಕೆಂದರೆ ಅಂತಹ ಮಹತ್ವದ ಪಂದ್ಯದಲ್ಲಿ ಕ್ರಿಕೆಟ್‌ನ ಈ ದಿಗ್ಗಜ ರನ್ ಔಟ್ ಆಗುವುದನ್ನು ನೋಡಲು ಅವರಿಗೂ ಇಷ್ಟವಿರಲಿಲ್ಲ. ಅದು ಧೋನಿ ರನ್ ಔಟ್ ಆಗುವುದು ಎಂದರೆ ಸಾವಿರದಲ್ಲಿ ಒಮ್ಮೆ ಮಾತ್ರ ಸಾಧ್ಯ. ಅಂತಹ ಘಟನೆ ಅಂದು ಸಂಭವಿಸಿತ್ತು. ಮೂರನೇ ಅಂಪೈರ್ ರೀಪ್ಲೇ ನೋಡಿದಾಗ ಧೋನಿ ಕ್ರೀಸ್ ದಾಟಲು ಒಂದು ನೂಲಿನ ಅಂತರ ಬ್ಯಾಟ್ ಮತ್ತು ಗೆರೆಯ ನಡುವೆ ಇತ್ತು. ಅವರು ರನ್ ಔಟ್ ಎಂದು ಘೋಷಿಸಲಾಯಿತು. ಭಾರತ ಗೆಲುವಿನ ಭರವಸೆ ಆಗಲೇ ಕುಗ್ಗಿ ಹೋಗಿತ್ತು.
ಭಾವೋದ್ವೇಗಕ್ಕೆ ಒಳಗಾದ ಧೋನಿ ಪೆವಿಲಿಯನ್‌ಗೆ ಮರಳಿದ್ದರು. ಹೀಗೆ ವಿಕೆಟ್ ಕಳೆದುಕೊಂಡ ನಂತರ ಧೋನಿ ತಮ್ಮ ಮೇಲೆ ತಾವೇ ತುಂಬಾ ಕೋಪಗೊಂಡು ಮೈದಾನದಿಂದ ಹೊರಗೆ ಹೋದರು. ಧೋನಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಹಿಂದೆಂದೂ ಈ ರೀತಿ ಕೋಪಿಸಿಕೊಂಡು ಪೆವಿಲಿಯನ್‌ಗೆ ಮರಳಿರಲಿಲ್ಲ. ಧೋನಿಯ ಕಣ್ಣುಗಳು ತೇವವಾಗಿದ್ದವು. ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಭಾರತೀಯ ಪ್ರೇಕ್ಷಕರ ಜೊತೆಗೆ ಕೋಟ್ಯಂತರ ಭಾರತೀಯ ಅಭಿಮಾನಿಗಳ ಕಣ್ಣಲ್ಲಿ ನೀರು ತುಂಬಿತ್ತು. ಈ ಪಂದ್ಯದಲ್ಲಿ ಭಾರತ 18 ರನ್‌ಗಳಿಂದ ನ್ಯೂಜಿಲ್ಯಾಂಡ್ ವಿರುದ್ಧ ಸೋತಿತ್ತು, ಧೋನಿ ವಿಕೆಟ್ ನಷ್ಟವಾದಾಗಲೇ ವಿಶ್ವಕಪ್ ಟ್ರೋಫಿ ಎತ್ತುವ ಭಾರತದ ಕನಸು ಭಗ್ನವಾಗಿತ್ತು.