ಲಂಡನ್: ಭಾರತದ ವಿರುದ್ಧ ಡ್ರಾನಲ್ಲಿ ಅಂತ್ಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನು ಮಾಜಿ ನಾಯಕ ಜೆಫ್ರಿ ಬಾಯ್ಕಾಟ್ ಟೀಕಿಸಿದ್ದಾರೆ.
ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಹೆಚ್ಚು ಏಕದಿನ ಕ್ರಿಕೆಟ್ ಕಡೆಗೆ ಗಮನ ಹರಿಸುತ್ತಿರುವುದರಿಂದ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ತಾಳ್ಮೆಯಿಂದ ಆಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಚೆಂಡು ಹೊಡೆಯಬಾರದೆಂಬ ಮನಸ್ಸಿದ್ದರೂ, ಒತ್ತಡವನ್ನು ಸಹಿಸಿಕೊಳ್ಳಲಾಗದೇ ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ ಎಂದು ಬಾಯ್ಕಾಟ್ ಹೇಳಿದ್ದಾರೆ.
ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 183 ರನ್ಗಳಿಗೆ ಆಲೌಟ್ ಆಗಿತ್ತು. ನಾಯಕ ಜೋ ರೂಟ್ ಮಾತ್ರ 64 ರನ್ಗಳಿಸಿದ್ದರು. 2ನೇ ಇನ್ನಿಂಗ್ಸ್ನಲ್ಲೂ 303 ರನ್ಗಳಿಸಿತ್ತು, ಆಗಲೂ ರೂಟ್ ಅವರೇ 109 ರನ್ಗಳಿಸಿ ಇಂಗ್ಲೆಂಡ್ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿದ್ದರು. ಇವರನ್ನು ಹೊರತುಪಡಿಸಿದರೆ ಬೇರೆ ಬ್ಯಾಟ್ಸ್ಮನ್ಗಳಲ್ಲಿ ಟೆಸ್ಟ್ ಕ್ರಿಕೆಟ್ ಮನೋಭಾವನೆ ಕಂಡುಬರಲಿಲ್ಲ ಎಂದು ಬಾಯ್ಕಾಟ್ ಹೇಳಿದ್ದಾರೆ.
ನಾನು ಇತ್ತೀಚೆಗೆ ಗ್ರಹಾಂ ಗೋಚ್ ಅವರೊಂದಿಗೆ ಇಂಗ್ಲೆಂಡ್ ಬ್ಯಾಟಿಂಗ್ ಬಗ್ಗೆ ಮಾತನಾಡಿದ್ದೇನೆ. ಅವರು, ಎದುರಾಳಿ ಬೌಲರ್ಗಳು ನಾಲ್ಕು ಕಠಿಣ ಎಸೆತಗಳನ್ನು ಪ್ರಯೋಗಿಸಿದರೆ ಸಾಕು, ನಮ್ಮ ಬ್ಯಾಟ್ಸ್ಮನ್ಗಳು 5 ಅಥವಾ 6ನೇ ಎಸೆತದಲ್ಲಿ ಆಡಲು ಹೋಗುತ್ತಾರೆ. ಆ ಸಂದರ್ಭದಲ್ಲಿ ತಾವಾಗಿಯೇ ವಿಕೆಟ್ ಒಪ್ಪಿಸುತ್ತಿದ್ದಾರೆ ಎಂದು ಟೆಲಿಗ್ರಾಫ್ಗೆ ಬರೆದಿರುವ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.