12 ವರ್ಷಗಳ ಹಿಂದೆ ಈ ದಿನ ಎಲ್ಲರೂ ಟಿವಿಯ ಮುಂದೆ ಕುಳಿತು ಕುತೂಹದಿಂದ ನೋಡುತ್ತಿದ್ದ ಕ್ಷಣವಾಗಿತ್ತು. ಇದಕ್ಕೆ ಕಾರಣ ಭಾರತದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯಾವಳಿ. ಅಂದು ಬಹುತೇಕ ಮಂದಿ ತಮ್ಮ ಕೆಲಸ ಕಾರ್ಯಗಳನ್ನು ತೊರೆದು ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಅಣಿಯಾಗಿದ್ದರು. ಭಾರತ ಫೈನಲ್ಸ್ನಲ್ಲಿ ನೆರೆಯ ರಾಷ್ಟ್ರ ಶ್ರೀಲಂಕಾದೊಂದಿಗೆ ಸೆಣಸಾಟ ಮಾಡಿತ್ತು.
ಕ್ರಿಕೆಟ್ ಇತಿಹಾಸದಲ್ಲಿ 2011ರ ಏಪ್ರಿಲ್ 2ರ ದಿನ ಭಾರತ ತಂಡಕ್ಕೆ ಅತ್ಯಂತ ವಿಶೇಷ. ಈ ದಿನದಂದು ಟೀಂ ಇಂಡಿಯಾ 28 ವರ್ಷಗಳ ಕಾಯುವಿಕೆಯ ನಂತರ ಮತ್ತೆ ಇನ್ನೊಂದು ಇತಿಹಾಸ ಬರೆದಿತ್ತು. ಏಪ್ರಿಲ್ 2 ರಂದು ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಕದಿನ ವಿಶ್ವಕಪ್ 2011 ರ ಫೈನಲ್ ಪಂದ್ಯವನ್ನು ಆಡಲಾಯಿತು.
ಆ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ನಾಯಕರಾಗಿದ್ದರು. ಧೋನಿ ನಾಯಕತ್ವದಲ್ಲಿ ಭಾರತ ತಂಡ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಮಣಿಸಿ ಎರಡನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತು. ಭಾರತ ತಂಡದಲ್ಲಿ ಅನುಭವಿಗಳಾದ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇದ್ದರು.
ಸಚಿನ್ ಹೊತ್ತು ತಿರುಗಿದ ವಿರಾಟ್:ಕ್ರಿಕೆಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಇದು ಅವರ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಗಿತ್ತು. ಸಚಿನ್ ತೆಂಡೂಲ್ಕರ್ ಅವರು ತಮ್ಮ ಕೊನೆಯ ವಿಶ್ವಕಪ್ ಅನ್ನು ಆಡುವುದು ಮತ್ತು ಗೆಲ್ಲುವುದು ಬಹಳ ಮುಖ್ಯ ಕನಸು ಹೊಂದಿದ್ದರು. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶ್ವಕಪ್ ಟ್ರೋಫಿ ಗೆದ್ದ ನಂತರ ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲ ಮೇಲೆ ಎತ್ತಿಕೊಂಡು ಇಡೀ ಮೈದಾನವನ್ನು ಸುತ್ತಿದರು. ವಿರಾಟ್ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಭಾರತದ ಈ ಅಮೋಘ ಗೆಲುವಿನೊಂದಿಗೆ ವಿರಾಟ್‌ಗೆ ಮಾತ್ರವಲ್ಲದೆ ತಂಡದ ಎಲ್ಲ ಆಟಗಾರರಿಗೆ ಹಾಗೂ ದೇಶದ ಜನತೆಗೆ ಸಂದ ಬಹುದೊಡ್ಡ ಗೆಲುವು ಇತಿಹಾಸದಲ್ಲಿ ದಾಖಲಾಗಿದೆ.
12 ವರ್ಷಗಳ ನಂತರ ಮತ್ತೆ ವಿಶ್ವಕಪ್:ಭಾರತ ತಂಡವು 1983 ರಲ್ಲಿ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರ ನಾಯಕತ್ವದಲ್ಲಿ ತನ್ನ ಮೊದಲ ವಿಶ್ವಕಪ್ ಗೆದ್ದಿತು. ಭಾರತ 28 ವರ್ಷಗಳ ಕಾಲ ವಿಶ್ವಕಪ್ ಟ್ರೋಫಿಗಾಗಿ ಕಾಯುತ್ತಲೇ ಇತ್ತು. ಈ ಕಾಯುವಿಕೆ 2011 ರಲ್ಲಿ ಕೊನೆಗೊಂಡಿತು. ಇದೀಗ ಭಾರತ ತಂಡವು ತನ್ನ ಮೂರನೇ ವಿಶ್ವಕಪ್ ಪ್ರಶಸ್ತಿಗಾಗಿ ಎದುರು ನೋಡುತ್ತಿದೆ. 2023ರ ವಿಶ್ವಕಪ್ ಭಾರತದಲ್ಲೇ ನಡೆಯುತ್ತಿದ್ದು, 12 ವರ್ಷದ ನಂತರ ಮತ್ತೆ ಐಸಿಸಿ ಟ್ರೋಪಿ ಗೆಲ್ಲುವ ಅವಕಾಶ ಇದೆ. ಇದೇ ವರ್ಷ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಪಂದ್ಯಗಳು ನಡೆಯಲಿದೆ.