ನವದೆಹಲಿ: ಹದಿನೇಳು ವರ್ಷಗಳ ಹಿಂದೆ ಈ ದಿನ ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಹಾಗೂ ಭಾರತ ಕ್ರಿಕೆಟ್ನ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಚಿತ್ತಗಾಂಗ್ನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಏಕದಿನ ಪಂದ್ಯದಲ್ಲಿ ಧೋನಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ವಿಶ್ವ ಕ್ರಿಕೆಟ್ನ ಶ್ರೇಷ್ಠ ವಿಕೆಟ್ ಕೀಪರ್ ಹಾಗೂ ಗ್ರೇಟ್ ಫಿನಿಶರ್ ಎನಿಸಿಕೊಂಡಿರುವ ಧೋನಿ ತಮ್ಮ ಮೊದಲ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಶೆಯನುಭವಿಸಿದ್ದರು. ಆ ಪಂದ್ಯದಲ್ಲಿ ಧೋನಿ ಅವರನ್ನು ಬಾಂಗ್ಲಾದೇಶದ ತಪಾಶ್ ಬೈಸ್ಯಾ ಮತ್ತು ಖಲಿದ್ ಮಶುದ್ ಸೇರಿ ಧೋನಿ ಅವರನ್ನು ರನ್ಔಟ್ ಮಾಡಿದ್ದರು.
ಪದಾರ್ಪಣೆ ಕೆಟ್ಟದಾಗಿದ್ದ ಹೊರತಾಗಿಯೂ ಧೋನಿ ತಮ್ಮ ವಿಕೆಟ್ ಕೀಪಿಂಗ್ ಕೌಶಲ್ಯ ಮತ್ತು ಇನ್ನಿಂಗ್ಸ್ಗಳನ್ನು ಅತ್ಯುತ್ತಮ ರೀತಿಯಲ್ಲಿ ಮುಗಿಸುವ ಮೂಲಕ ವಿಶ್ವದ ಶ್ರೇಷ್ಠ ಫಿನಿಶರ್ ಎಂಬ ಖ್ಯಾತಿಗೆ ಪಾತ್ರರಾದರು.
ಬಹಳ ಬೇಗ ಭಾರತ ತಂಡದ ಸಾರಥ್ಯ ವಹಿಸಿಕೊಂಡ ಜಾರ್ಖಂಡ್ ಕ್ರಿಕೆಟಿಗ ಭಾರತವನ್ನು ಮೊದಲ ಬಾರಿಗೆ ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂಬರ್ 1ಗೆ ಕೊಂಡಯ್ದ ಕೀರ್ತಿಯ ಜೊತೆಗೆ ಐಸಿಸಿ ಆಯೋಜನೆಯ ಎಲ್ಲ ಟೂರ್ನಿಗಳನ್ನು ಗೆದ್ದ ವಿಶ್ವ ಏಕೈಕ ನಾಯಕ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ 2011ರಲ್ಲಿ ಏಕದಿನ ವಿಶ್ವಕಪ್, 2007ರಲ್ಲಿ ಟಿ-20 ವಿಶ್ವಕಪ್ ಹಾಗೂ 2013 ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ.