ಮುಂಬೈ: ಜುಲೈ 13 ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅಭಿಮಾನಿಗಳು ಎಂದೂ ಮರೆಯಲಾಗದ ದಿನ. ಭಾರತದಲ್ಲಿ ಕ್ರಿಕೆಟ್ ನೆಲೆ ನಿಲ್ಲುವಂತೆ ಮಾಡಿದ್ದ ಆ ಪಂದ್ಯ, ಲಾರ್ಡ್ಸ್ ಮೈದಾನದಲ್ಲಿ ಗಂಗೂಲಿ ಜರ್ಸಿ ಬಿಚ್ಚಿ ಕುಣಿದಾಡಿದ್ದ ದಿನ, ಒಟ್ಟಿನಲ್ಲಿ ಭಾರತ ಕ್ರಿಕೆಟ್ ಬದಲಾದ ದಿನವಿದು.
ಹೌದು ಇಂದಿಗೆ 18 ವರ್ಷಗಳ ಹಿಂದೆ, ಜುಲೈ 13 2002ರಲ್ಲಿ ಗಂಗೂಲಿ ನೇತೃತ್ವದ ಭಾರತ ತಂಡ ಐತಿಹಾಸಿಕ ನಾಟ್ವೆಸ್ಟ್ ಸರಣಿ ಗೆದ್ದು ಲಾರ್ಡ್ಸ್ ಮೈದಾನದಲ್ಲಿ ಸಂಭ್ರಮಿಸಿತ್ತು. ಕೈಫ್, ಯುವರಾಜ್ ಆಟ ಭಾರತೀಯರ ಮನಗೆದ್ದಿತ್ತು. ಇಂಗ್ಲೆಂಡ್ ನೆಲದಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದ ಬಂಗಾಳದ ಹುಲಿ ಜರ್ಸಿ ಬಿಚ್ಚಿ ಸಂಭ್ರಮಿಸುವ ಮೂಲಕ ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಟ್ರೆಸ್ಕೋತಿಕ್(109) ಹಾಗೂ ನಾಸಿರ್ ಹುಸೇನ್(115) ಶತಕಗಳ ನೆರವಿನಿಂದ ಭಾರತಕ್ಕೆ 326 ರನ್ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ್ದ ಭಾರತ ತಂಡ 8 ವಿಕೆಟ್ ಕಳೆದುಕೊಂಡು 49.3 ಓವರ್ಗಳಲ್ಲಿ ಗುರಿ ತಲುಪಿ ಇತಿಹಾಸ ನಿರ್ಮಿಸಿತ್ತು.
326 ರನ್ಗಳ ಟಾರ್ಗೆಟ್ ಪಡೆದಿದ್ದ ಭಾರತ ತಂಡ ಮೊದಲ ವಿಕೆಟ್ಗೆ 106 ರನ್ಗಳ ಜೊತೆಯಾಟ ನೀಡಿತ್ತು. ಗಂಗೂಲಿ 43 ಎಸೆತಗಳಲ್ಲಿ 60 ರನ್ಗಳಿಸಿ ಭರ್ಜರಿ ಆರಂಭ ನೀಡಿದ್ದರು. ಆದರೆ, ನಂತರ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ದಿಢೀರ್ ಕುಸಿತ ಕಂಡ ಟೀಮ್ ಇಂಡಿಯಾ 146 ರನ್ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು ಸೋಲಿನತ್ತ ಮುಖ ಮಾಡಿತ್ತು.
ಆದರೆ, 6ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ಮೊಹಮ್ಮದ್ ಕೈಫ್ (ಔಟಾಗದೇ 87) ಹಾಗೂ ಯುವರಾಜ್(69) 121 ರನ್ಗಳ ಜೊತೆಯಾಟ ನಡೆಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಕೊನೆಯವರೆಗೂ ಹೋರಾಡಿದ್ದ ಕೈಫ್ 75 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 87 ರನ್ಗಳಿಸಿ ಭಾರತಕ್ಕೆ ಟ್ರೋಫಿ ತಂದು ಕೊಟ್ಟಿದ್ದರು.
ಈ ಪಂದ್ಯ ಕೇವಲ ಪ್ರಶಸ್ತಿಯನ್ನು ಮಾತ್ರ ತಂದು ಕೊಡಲಿಲ್ಲ. ಮ್ಯಾಚ್ ಫಿಕ್ಸಿಂಗ್ನಿಂದ ಕ್ರಿಕೆಟ್ ನೋಡುವುದನ್ನೇ ಬಿಟ್ಟಿದ್ದ ಭಾರತೀಯರನ್ನು ಮತ್ತೆ ಮೈದಾನಕ್ಕೆ ಬರುವಂತೆ ಮಾಡಿತು. ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡ ಅಗ್ರ ರಾಷ್ಟ್ರಗಳ ಪಟ್ಟಿಗೆ ಸೇರಿತು. ವಿಶ್ವಕ್ರಿಕೆಟ್ನಲ್ಲಿ 'ದಾದಾ'ಗಿರಿಗೆ ನಾಂದಿ ಹಾಡಿಸಿತ್ತು. ಈ ಸರಣಿಯ ನಂತರ ಭಾರತ ತಂಡ ದೇಶ ವಿದೇಶಗಳಲ್ಲಿ ದಿಗ್ವಿಜಯ ಸಾಧಿಸಿತು. 2003ರ ವಿಶ್ವಕಪ್ ಟೂರ್ನಿಗೆ ಭಾರತೀಯ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ನೆರವಾಯಿತು.