ನವದೆಹಲಿ: ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸಿದ್ದಕ್ಕೆ ಭಾರತ ತಂಡದ ಈಗಿನ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಕ್ರೀಡಾಂಗಣದ ಗ್ಯಾಲರಿಯಲ್ಲಿ ತಮ್ಮ ಜರ್ಸಿಯನ್ನು ಬಿಚ್ಚಿ ಕುಣಿದು ಕುಪ್ಪಳಿಸಿದ ದೃಶ್ಯವನ್ನು ಯಾರು ನೋಡಿಲ್ಲ? ಎಲ್ಲರೂ ನೋಡಿದವರೆ. 2002ರಲ್ಲಿ ಇಂತಹದ್ದೊಂದು ಯಾರೂ ಮರೆದ ಘಟನೆ ನಡೆದಿದ್ದು ಈ ಸುದಿನಕ್ಕೆ ಇಂದಿಗೆ ಬರೋಬ್ಬರಿ 23 ವರ್ಷ. ತಮ್ಮ ತವರು ನೆಲದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡ ಪ್ರತಿಷ್ಠಿತ ನಾಟ್ವೆಸ್ಟ್ ತ್ರಿಕೋನ ಸರಣಿ ಗೆದ್ದ ಕ್ಷಣವಿದು. ಸಾಗರೋತ್ತರದಲ್ಲಿ ಮೊದಲ ಬಾರಿ ಗೆಲ್ಲುವ ಮೂಲಕ ಭಾರತ ಅಂದು ಇತಿಹಾಸ ಬರೆಯಿತು. ಈ ಇತಿಹಾಸಕ್ಕೆ ಇದೀಗ 23ರ ಸಂಭ್ರಮ.
ಟೂರ್ನಿಯನ್ನು ಹೈಲೈಟ್ ಮಾಡಿದ ಸೌರವ್ ಗಂಗೂಲಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿನ ಅತ್ಯಂತ ರೋಚಕ ಪಂದ್ಯಗಳಲ್ಲಿ ಇದು ಕೂಡ ಒಂದು. ಭಾರತ, ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆದ ನಾಟ್ವೆಸ್ಟ್ 2002ರ ತ್ರಿಕೋನ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೌರವ್ ಗಂಗೂಲಿ ನಾಯಕತ್ವದ ಭಾರತ ತಂಡ ರೋಚಕ ಗೆಲುವು ಸಾಧಿಸಿತ್ತು. ಇದು ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿತ್ತು. ಆ ಗೆಲುವಿನ ಹುಮ್ಮಸ್ಸಿನಲ್ಲಿ ಸೌರವ್ ಗಂಗೂಲಿ ಲಂಡನ್‌ನ ಲಾರ್ಡ್ಸ್ ಮೈದಾನದ ಗ್ಯಾಲರಿಯಲ್ಲಿ ತಮ್ಮ ಜರ್ಸಿಯನ್ನು ತೆಗೆದು ಗಾಳಿಯಲ್ಲಿ ಬೀಸುವ ಮೂಲಕ ಟೂರ್ನಿಯನ್ನು ಹೈಲೈಟ್ ಆಗಿದ್ದರು. ಹೀಗೆ ಮಾಡಲು ಅದಕ್ಕೆ ಅದರದ್ದೇ ಆದ ಇತಿಹಾಸವೂ ಉಂಟು. ಅದು ಮತ್ತೊಂದು ಅಧ್ಯಾಯ.
ನ್ಯಾಟ್ವೆಸ್ಟ್ ತ್ರಿಕೋನ ಸರಣಿ ಗೆದ್ದ ಭಾರತಕ್ಕೆ ಇತಿಹಾಸ ಕ್ಷಣ
ಅಂದು ನಡೆದ ರೋಚಕ ಸರಣಿ: 2002ರ ತ್ರಿಕೋನ ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು, ಒಂದು ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ, 19 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಫೈನಲ್ ತಲುಪಿತ್ತು. ಒಂದು ಫಲಿತಾಂಶವಿಲ್ಲದ, ಮೂರು ಗೆಲುವು, ಎರಡು ಸೋಲು ಕಂಡಿದ್ದ ಇಂಗ್ಲೆಂಡ್ 15 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಭಾರತವು ಇಂಗ್ಲೆಂಡ್ ತಂಡವನ್ನು ಒಂದು ಬಾರಿ ಮತ್ತು ಶ್ರೀಲಂಕಾವನ್ನು ಮೂರು ಬಾರಿ ಸೋಲಿಸಿದ್ದರೆ, ಇಂಗ್ಲೆಂಡ್ ಎರಡು ಬಾರಿ ಶ್ರೀಲಂಕಾವನ್ನು ಮತ್ತು ಭಾರತವನ್ನು ಒಂದು ಬಾರಿ ಸೋಲಿಸಿತ್ತು. ಶ್ರೀಲಂಕಾ ಒಂದು ಪಂದ್ಯವನ್ನು ಮಾತ್ರ ಗೆದ್ದು ಐದರಲ್ಲಿ ಸೋಲು ಕಂಡಿತ್ತು.
ಉಭಯ ತಂಡಗಳ ಬಲಾಬಲ: ಯುನೈಟೆಡ್ ಕಿಂಗ್‌ಡಮ್‌ನ ಅತ್ಯಂತ ಶ್ರೇಷ್ಠ ಮೈದಾನ ಲಾರ್ಡ್ಸ್‌ನಲ್ಲಿ ಫೈನಲ್ ಪಂದ್ಯ ಏರ್ಪಟ್ಟಿತ್ತು. ಮಾರ್ಕಸ್ ಟ್ರೆಸ್ಕೊಥಿಕ್, ನಿಕ್ ನೈಟ್, ನಾಯಕ ನಾಸೀರ್ ಹುಸೇನ್, ಮೈಕೆಲ್ ವಾನ್, ಆಂಡ್ರ್ಯೂ ಫ್ಲಿಂಟಾಫ್, ಡ್ಯಾರೆನ್ ಗಫ್ ಸೇರಿದಂತೆ ಹಲವು ಆಟಗಾರರನ್ನು ಹೊಂದಿದ್ದ ಇಂಗ್ಲೆಂಡ್ ತಂಡವು ಉತ್ತಮ ದೊಡ್ಡ ಮೊತ್ತದ ಸವಾಲು ನೀಡಿತ್ತು. ನಾಯಕ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಮೊಹಮ್ಮದ್ ಕೈಫ್ ಮತ್ತು ಅನಿಲ್ ಕುಂಬ್ಳೆ ಅವರನ್ನು ಒಳಗೊಂಡ ಭಾರತವು ಇಂಗ್ಲೆಂಡ್ ನೀಡಿದ ಬೃಹತ್ ಮೊತ್ತವನ್ನು ತಲುಪಿತ್ತು.
ಅಂದು ನಡೆದ ರೋಚಕ ಪಂದ್ಯ: ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 325 ರನ್ ಕಲೆ ಹಾಕಿತ್ತು. ನಾಯಕ ನಾಸೀರ್ ಹುಸೇನ್ 128 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 115 ರನ್ ಗಳಿಸಿದರೆ, ಮಾರ್ಕಸ್ ಟ್ರೆಸ್ಕೊಥಿಕ್ ಕೇವಲ 100 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 109 ರನ್ ಗಳಿಸಿದ್ದರು. ಆಲ್ ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ 32 ಎಸೆತಗಳಲ್ಲಿ 40 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಭಾರತೀಯ ಬೌಲರ್ಗಳನ್ನು ಸಲೀಸಾಗಿ ಎದುರಿಸಿದ ಆಂಗ್ಲರು, ಇಬ್ಬರ ಶತಕದಾಟದಿಂದ 325 ಗಡಿಗೆ ಬಂದರು. ವಿಕೆಟ್ ಪಡೆಯುವಲ್ಲಿ ಭಾರತೀಯ ವೇಗಿಗಳು ಅಂದು ಹರಸಾಹಸವೇ ಪಡಬೇಕಾಯಿತು. ಜಹೀರ್ ಖಾನ್ (3/62), ಆಶಿಶ್ ನೆಹ್ರಾ (1/66) ಮತ್ತು ಅನಿಲ್ ಕುಂಬ್ಳೆ (1/54) ವಿಕೆಟ್ ಪಡೆದು ರನ್ ಗಳಿಕೆಗೆ ಬ್ರೇಕ್ ನೀಡಿದರು.
ನ್ಯಾಟ್ವೆಸ್ಟ್ ತ್ರಿಕೋನ ಸರಣಿ ಗೆದ್ದ ಭಾರತಕ್ಕೆ ಇತಿಹಾಸ ಕ್ಷಣ
ಅತಿ ದೊಡ್ಡ ಮೊತ್ತ: ಭಾರತಕ್ಕೆ ಫೈನಲ್‌ನಲ್ಲಿ ಗೆಲ್ಲಲು 326 ರನ್‌ಗಳ ಅಗತ್ಯವಿತ್ತು. ಈ 326 ಬೃಹತ್ ಮೊತ್ತ ಸವಾಲಾಗಿದ್ದರೂ ಬೆನ್ನು ಹತ್ತಿದ ಭಾರತ, ರೋಚಕ ಕೊನೆಯ ಓವರ್ನಲ್ಲಿ ಗೆಲುವಿನ ದಡ ಸೇರಿತು. ಆರಂಭಿಕರಾದ ವೀರೇಂದ್ರ ಸೆಹ್ವಾಗ್ (49 ಎಸೆತಗಳಲ್ಲಿ 7 ಬೌಂಡರಿ ಸೇರಿ 45 ರನ್) ಮತ್ತು ಸೌರವ್ ಗಂಗೂಲಿ (43 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 60 ರನ್) ತಂಡಕ್ಕೆ ಉತ್ತಮ ತಳಪಾಯ ಹಾಕಿದರು. ಕೇವಲ 15 ಓವರ್‌ಗಳಲ್ಲಿ 106 ರನ್ ಗಳಿಸುವ ಮೂಲಕ ತಂಡಕ್ಕೆ ಬೇಕಾದ ವೇಗವನ್ನು ನೀಡಿದರು. ಇವವ ಬಳಿಕ ಬಂದ ಸಚಿನ್ (14) ಮತ್ತು ದ್ರಾವಿಡ್ (5) ಸಣ್ಣ ಮೊತ್ತ ನೀಡಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಇನ್ನೇನು ಭಾರತ ತಂಡ ಸೋಲುವುದು ಖಚಿತವೆಂದು ಎಲ್ಲರೂ ಅಂದುಕೊಳ್ಳಲಾಂಭಿಸಿದ್ದರು. 24 ಓವರ್‌ಗಳಲ್ಲಿ 146/5 ಆಗಿದ್ದಾಗ ತಂಡ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನೆಲ್ಲ ಕಳೆದುಕೊಂಡಿತ್ತು. ಸೋಲು ಸಮೀಸುತ್ತಿದ್ದಂತೆ ನಿರಾಸೆ ಮತ್ತೆ ಹೆಚ್ಚಾಗತೊಡಗಿತ್ತು. ಆದರೆ, ಮಧ್ಯಮ ಕ್ರಮಾಂಕದ ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಜವಾಬ್ದಾರಿಯುತ ಆಟವಾಡಿ ಭಾರತವನ್ನು 250 ರನ್ ದಾಟಲು ನೆರವಾದರು.
ನ್ಯಾಟ್ವೆಸ್ಟ್ ತ್ರಿಕೋನ ಸರಣಿ ಗೆದ್ದ ಭಾರತಕ್ಕೆ ಇತಿಹಾಸ ಕ್ಷಣ
ಹೀರೋ ಆದ ಕೆಳ ಕ್ರಮಾಂಕದ ಆಟಗಾರರು: ಅವರ 121 ರನ್‌ಗಳ ಜೊತೆಯಾಟ ಭಾರತದ ಗೆಲುವಿನ ರುಚಿಗೆ ತಂದಿಟ್ಟಿತು. 63 ಎಸೆತಗಳನ್ನು ಎದುರಿಸಿದ ಯುವರಾಜ್ ಸಿಂಗ್ 69 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಕೈಫ್ಗೆ ಆಸರೆಯಾದ ಹರ್ಭಜನ್ ಸಿಂಗ್ 15 ರನ್ ಗಳಿಸಿ ಮೌಲ್ಯಯುತ 47 ರನ್ ಜೊತೆಯಾಟ ನೀಡಿದರು. ಅವರು ಔಟ್ ಆದರು. ಬಳಿಕ ಕೈಫ್ ಮತ್ತು ಜಹೀರ್ (4*) ಭಾರತಕ್ಕೆ ಮೂರು ಎಸೆತಗಳು ಬಾಕಿ ಇರುವಂತೆಯೇ ಎರಡು ವಿಕೆಟ್‌ಗಳ ಜಯ ತಂದುಕೊಟ್ಟರು. ಕೈಫ್ ಕೇವಲ 75 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 87* ರನ್ ಗಳಿಸಿ ಭಾರತದ ಹೀರೋ ಆಗಿದ್ದರು. ಕೆಳ ಕ್ರಮಾಂಕದಲ್ಲಿ ಜಹೀರ್ ಖಾನ್ ಎರಡು ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಇಂಗ್ಲೆಂಡ್‌ಗೆ ಸೋಲಿನ ರುಚಿ ತೋರಿಸಿದರು. ಗೆಲವಿನ ಅಲೆಯಲ್ಲಿ ತೇಲುತ್ತಿದ್ದ ಇಂಗ್ಲೆಂಡ್ ತಂಡ ಕೆಳ ಕ್ರಮಾಂಕದ ಆಟಗಾರರ ಮೋಡಿಗೆ ಮಂಕಾದರು. ಇನ್ನೇನು ಪ್ರಶಸ್ತಿ ತಮ್ಮದೇ ಎಂದು ಬೀಗುತ್ತಿದ್ದ ತಂಡಕ್ಕೆ ಶಾಕ್ ನೀಡಿದ ಭಾರತ ಐತಿಹಾಸಿಕ ಪ್ರಶಸ್ತಿ ಜಯವನ್ನು ತನ್ನ ಹೆಸರಿಗೆ ಬರೆದುಕೊಂಡಿತು. ಫೈನಲ್‌ನಲ್ಲಿ ವೀರೋಚಿತ ಇನ್ನಿಂಗ್ಸ್‌ಗಾಗಿ ಕೈಫ್ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ಇರಾನಿ, ಗೈಲ್ಸ್ ಮತ್ತು ಫ್ಲಿಂಟಾಫ್ ತಲಾ ಎರಡು ವಿಕೆಟ್ ಪಡೆದರು. ಗೆಲುವಿನ ಬಳಿಕ ಸೌರವ್ ಗಂಗೂಲಿ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿಯೇ ತಮ್ಮ ಜರ್ಸಿಯನ್ನು ತೆಗೆದು ಕೋಪದ ಜೊತೆಗೆ ಸಂತಸ ಹೊರಹಾಕಿದ್ದರು. ಅವರು ತಮ್ಮ ಜರ್ಸಿಯನ್ನು ತೆಗೆದು ಗಾಳಿಯಲ್ಲಿ ಬೀಸಿದ್ದರಿಂದ ಟೂರ್ನಿ ಹೈಲೈಟ್ ಆಗಿತ್ತು. ಈ ದೃಶ್ಯ ಇಂದಿಗೂ ಕ್ರೀಡಾಭಿಮಾನಿಗಳಲ್ಲಿ ಫುಳಕ ನೀಡುತ್ತದೆ.
ಇದನ್ನೂ ಓದಿ:India Vs West Indies Test : ಟಾಸ್ ಗೆದ್ದು ವಿಂಡೀಸ್ ಬ್ಯಾಟಿಂಗ್; ಟೆಸ್ಟ್ಗೆ ಜೈಸ್ವಾಲ್ ಪದಾರ್ಪಣೆ