ನವದೆಹಲಿ: ಇಂದಿನ ದಿನ ಅಂದರೆ ಜೂನ್ 18 ಭಾರತೀಯ ಕ್ರಿಕೆಟ್‌ಗೆ ತುಂಬಾ ವಿಶೇಷವಾಗಿದೆ. ಈ ದಿನ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಟ್ಟ ಶ್ರೇಷ್ಠ ನಾಯಕ ಕಪಿಲ್ ದೇವ್ ಏಕದಿನ ಕ್ರಿಕೆಟ್‌ನ ಐತಿಹಾಸಿಕ ಇನ್ನಿಂಗ್ಸ್ ಆಡಿದರು. 1983ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧದ ಲೀಗ್ ಪಂದ್ಯದಲ್ಲಿ ಕಪಿಲ್ ದೇವ್ 175 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದ್ದರು. ಇದು ಏಕದಿನದಲ್ಲಿ ಯಾವುದೇ ಭಾರತೀಯ ಆಟಗಾರ ಗಳಿಸಿದ ಮೊದಲ ಶತಕವಾಗಿದೆ. ಈ ಇನ್ನಿಂಗ್ಸ್‌ನೊಂದಿಗೆ ಕಪಿಲ್ ದೇವ್ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದ್ದಲ್ಲದೆ, ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಪಿಲ್ ದೇವ್ ಕ್ರೀಸ್ ಬರುವ ಮೊದಲು ಸಂಕಷ್ಟದಲ್ಲಿ ಭಾರತ: 1983ರ ವಿಶ್ವಕಪ್‌ನ 20ನೇ ಲೀಗ್ ಪಂದ್ಯವು ಭಾರತ ಮತ್ತು ಜಿಂಬಾಬ್ವೆ ನಡುವೆ ಇಂಗ್ಲೆಂಡ್‌ನ ಟನ್‌ಬ್ರಿಡ್ಜ್ ವೆಲ್ಸ್‌ನಲ್ಲಿ ನಡೆಯುತ್ತಿತ್ತು. ಟಾಸ್ ಗೆದ್ದ ನಂತರ, ಭಾರತ ತಂಡದ ನಾಯಕ ಕಪಿಲ್ ದೇವ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು, ಇದು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ತಪ್ಪಾದ ನಿರ್ಧಾರ ಎಂದು ಸಾಬೀತಾಯಿತು. ಸುನಿಲ್ ಗವಾಸ್ಕರ್ ಮತ್ತು ಕೆ. ಶ್ರೀಕಾಂತ್ ಅವರ ಆರಂಭಿಕ ಜೋಡಿ ಖಾತೆ ತೆರೆಯದೆ ಪೆವಿಲಿಯನ್ಗೆ ಮರಳಿತು. ಮೊಹಿಂದರ್ ಅಮರನಾಥ್ (5), ಸಂದೀಪ್ ಪಾಟೀಲ್ (1) ಮತ್ತು ಯಶಪಾಲ್ ಶರ್ಮಾ (9) ರನ್ ಗಳಿಸಿ ಔಟಾದರು. 17 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟದಲ್ಲಿತ್ತು. ಆದರೆ ಇದಾದ ಬಳಿಕ ಮೈದಾನಕ್ಕಿಳಿದ ನಾಯಕ ಕಪಿಲ್ ದೇವ್ ಬಿರುಸಿನ ಶತಕ ಬಾರಿಸುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು.
ಕಪಿಲ್ ದೇವ್ 175 ರನ್ನ ಐತಿಹಾಸಿಕ ಇನ್ನಿಂಗ್ಸ್ : ಭಾರತದ ನಾಯಕ ಮೈದಾನದಲ್ಲಿ ಬ್ಯಾಟಿಂಗ್ ಮಾಡಲು ಹೊರಬಂದಾಗ ಭಾರತ 17 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ಆ ನಂತರ ನಡೆದದ್ದು ಪವಾಡವೇ. ಕಪಿಲ್ ಒಂದು ತುದಿಯನ್ನು ನಿಭಾಯಿಸುವ ಮೂಲಕ ತನ್ನ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು ಮತ್ತು ಸ್ಕೋರ್ಬೋರ್ಡ್ ಅನ್ನು ವೇಗವಾಗಿ ಹೆಚ್ಚಿಸಲು ಪ್ರಾರಂಭಿಸಿದರು. ಈ ದಿನ ಕಪಿಲ್ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡರು. ಮೈದಾನದ ಸುತ್ತಲೂ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆ ಸುರಿಸತೊಡಗಿದರು.