ಜೋಹಾನ್ಸ್ಬರ್ಗ್:ಅಸಾಧಾರಣ ಭಾರತ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಸೋಮವಾರದಿಂದ ಜೋಹಾನ್ಸ್ಬರ್ಗ್ನಲ್ಲಿ 2ನೇ ಟೆಸ್ಟ್ ಪಂದ್ಯವನ್ನಾಡಲಿದ್ದು, ಇದರಲ್ಲಿ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಟೆಸ್ಟ್ ಸರಣಿಯನ್ನು ಗೆಲ್ಲುವುದಕ್ಕೆ ಎದುರು ನೋಡುತ್ತಿದೆ.
ಸೆಂಚುರಿಯನ್ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಹರಿಣಗಳ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದರು. ಇದೀಗ ಹೊಸ ವರ್ಷದಲ್ಲಿ ನಡೆಯುವ ಮೊದಲ ಪಂದ್ಯ ಭಾರತದ ವಿದೇಶಿ ಸರಣಿ ಗೆಲುವಿನ ದಂಡಯಾತ್ರೆಗೆ ಮತ್ತಷ್ಟು ಬಲವನ್ನು ನೀಡಲಿದೆ.
ಈಗಾಗಲೇ ಈ ಹಿಂದಿನ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆದ್ದು ಬೀಗಿರುವ ಭಾರತ, ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು, ಈ ಸರಣಿಯನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. ಅಲ್ಲದೆ ಭಾರತ ಇಂದು ವಿಶ್ವದ ಅತ್ಯಂತ ಶ್ರೇಷ್ಠ ತಂಡವಾಗಿ ರೂಪುಗೊಳ್ಳಲು ಅಡಿಗಲ್ಲು ಹಾಕಿದ್ದು ಕೂಡ ಇದೇ ಹರಿಣಗಳ ನಾಡಿನಲ್ಲಿ ಎನ್ನುವುದು ಮತ್ತೊಂದು ವಿಶೇಷ. 2018 ರ ಪ್ರವಾಸದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 1-2ರಲ್ಲಿ ಟೆಸ್ಟ್ ಸರಣಿ ಸೋತರು 3 ಪಂದ್ಯಗಳಲ್ಲೂ ಎದುರಾಳಿಯ ಎಲ್ಲಾ 60 ವಿಕೆಟ್ ಉಡಾಯಿಸುವ ಮೂಲಕ ಕ್ರಿಕೆಟ್ ಜಗತ್ತಿಗೆ ಭಾರತದ ಬೌಲಿಂಗ್ ಶಕ್ತಿಯನ್ನು ಪರಿಚಯಿಸಿದ್ದರು.
ವಿರಾಟ್ ಹೆಸರಿಗೆ ದಾಖಲೆ
ವಾಂಡರರ್ಸ್‌ನಲ್ಲಿ ಭಾರತ ಟೆಸ್ಟ್ ಪಂದ್ಯವನ್ನು ಗೆದ್ದಿದ್ದೇ ಆದರೆ ನ್ಯೂಜಿಲೆಂಡ್ ಹೊರತುಪಡಿಸಿ SENA ರಾಷ್ಟ್ರಗಳಲ್ಲಿ ಟೆಸ್ಟ್ ಸರಣಿ ಗೆದ್ದ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ನಾಯಕ ಎಂಬ ವಿಶೇಷ ದಾಖಲೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಈಗಾಗಲೇ ಕೊಹ್ಲಿ ವಿದೇಶದಲ್ಲಿ ಹೆಚ್ಚು ಟೆಸ್ಟ್ ಗೆದ್ದ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ.
ಗ್ರೇಮ್ ಸ್ಮಿತ್ ಅವರಂತಹ ವಿಶ್ವಾಸ, ಹಾಸಿಮ್ ಆಮ್ಲಾರ ಕ್ಲಾಸ್, ಜಾಕ್ ಕಾಲೀಸ್ ಅವರ ಸ್ಥಿರತೆ ಮತ್ತು ಡೇಲ್ ಸ್ಟೇನ್ ಹಾಗೂ ಮಾರ್ನ್ ಮಾರ್ಕೆಲ್ ಅವರಂತಹ ವೇಗದ ಬೌಲರ್ಗಳ ಸೇವೆಯನ್ನು ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದು ಟೆಸ್ಟ್ ಸರಣಿಯನ್ನು ಗೆಲ್ಲುವುದಕ್ಕೆ ಕೊಹ್ಲಿ ಪಡೆಗೆ ಇದು ಒಳ್ಳೆಯ ಸಮಯ ಎಂದರೆ ಅತಿಶಯೋಕ್ತಿಯಲ್ಲ.
ಭಾರತ ತಂಡದ ಬ್ಯಾಟಿಂಗ್ ಲೈನ್ ಅಪ್ಗೆ ಹೋಲಿಸದರೆ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ತುಂಬಾ ಸಾಧಾರಣವಾಗಿದೆ. ಅದರಲ್ಲೂ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿರುವುದರಿಂದ ಅತಿಥೇಯ ತಂಡಕ್ಕೆ ಬಹುದೊಡ್ಡ ಹಿನ್ನಡೆಯಾಗಲಿದೆ. ಡಿಕಾಕ್ ಬದಲಿ 25 ವರ್ಷದ ರಿಯಾನ್ ರಿಕ್ಲೆಟನ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಲಿದ್ದಾರೆ. ಅವರು ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ರನ್ಗಳಿಸಿದ್ದರೂ ಬುಮ್ರಾ, ಶಮಿ ಅಂತಹ ವಿಶ್ವಶ್ರೇಷ್ಠ ವೇಗಿಗಳನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ.
ದಕ್ಷಿಣ ಆಫ್ರಿಕಾದಲ್ಲಿ ಆರಂಭಿಕರ ವೈಫಲ್ಯವೂ ದೊಡ್ಡ ತಲೆನೋವಾಗಿದೆ. ನಾಯಕ ಡೀನ್ ಎಲ್ಗರ್ ಮತ್ತು ಉಪನಾಯಕ ಬವುಮಾ ಬಿಟ್ಟರೆ ತಂಡದಲ್ಲಿ ಯಾರೊಬ್ಬರು ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರದಿರುವುದು ತಂಡವನ್ನು ಸಂಕಷ್ಟಕ್ಕೀಡು ಮಾಡಿದೆ.