ಪಲ್ಲೆಕೆಲೆ (ಶ್ರೀಲಂಕಾ): ನಾವು ನಮ್ಮ ಅನುಭವದಡಿಯಲ್ಲಿ ಪಾಕಿಸ್ತಾನದ ಅತ್ಯುತ್ತಮ ಬೌಲರ್‌ಗಳಾದ ಶಾಹೀನ್ ಅಫ್ರಿದಿ, ನಸೀಮ್ ಶಾ ಹಾಗು ಹ್ಯಾರಿಸ್ ರೌಫ್ ಅವರನ್ನು ದಿಟ್ಟವಾಗಿ ಎದುರಿಸುತ್ತೇವೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದರು.
"ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ನಮ್ಮ ತಂಡ ಉತ್ತಮ ಆರಂಭ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಕೆಲಸ. ನಾನು ದೀರ್ಘಕಾಲ ಕ್ರೀಸ್ನಲ್ಲಿ ಉಳಿಯುವ ನಂಬಿಕೆ ಇದೆ. 16 ವರ್ಷಗಳ ಎಲ್ಲಾ ಅನುಭವವನ್ನು ಬಳಸಲು ಪ್ರಯತ್ನಿಸುತ್ತೇನೆ. ಆಟದಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಕೆಲಸ ಮಾಡುತ್ತೇನೆ" ಎಂದರು.
"ಪಾಕಿಸ್ತಾನ ಇತ್ತೀಚೆಗೆ ಏಕದಿನ ಮತ್ತು ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಲು ಶ್ರಮಿಸಿದೆ. ನಾಳೆ ಅವರ ವಿರುದ್ಧ ಆಡುತ್ತಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ. ವಿಶ್ವಕಪ್ಗೂ ಮುನ್ನ ನಾವು ಏಕದಿನ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಇದಕ್ಕೆ ಏಷ್ಯಾಕಪ್ ಒಂದು ವೇದಿಕೆ. ಆದರೆ ಇಲ್ಲಿ ಪ್ರಯೋಗ ಮಾಡುವ ಅವಕಾಶವಿಲ್ಲ. ನಮ್ಮ ಆಟವನ್ನು ಶ್ರದ್ಧೆಯಿಂದ ಆಡಬೇಕು" ಎಂದು ತಿಳಿಸಿದರು.
"ನಮ್ಮೆಲ್ಲಾ ಆರು ಬೌಲರ್‌ಗಳು ನಿಸ್ಸಂದೇಹವಾಗಿ ಶ್ರೇಷ್ಠ ಬೌಲರ್‌ಗಳೇ. ಅದನ್ನವರು ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಬುಮ್ರಾ, ಶಮಿ ಮತ್ತು ಸಿರಾಜ್ ಉತ್ತಮ ಲಯದಲ್ಲಿದ್ದಾರೆ. ವಿಶೇಷವಾಗಿ ಬುಮ್ರಾ ಗಾಯದಿಂದ ಕಮ್ಬ್ಯಾಕ್ ಮಾಡಿದ್ದಾರೆ. ಐರ್ಲೆಂಡ್ ವಿರುದ್ಧ ತಂಡಕ್ಕೆ ಮರಳಿರುವ ಅವರು ಉತ್ತಮವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ನಾವು ಹೊಂದಿದ್ದ ಸಣ್ಣಪುಟ್ಟ ಶಿಬಿರದಲ್ಲಿಯೂ ಉತ್ತಮವಾಗಿ ಕಾಣುತ್ತಿದ್ದರು. ಹೊಸ ಉತ್ಸಾಹದಲ್ಲಿದ್ದಾರೆ, ಇದು ನಮಗೆ ಒಳ್ಳೆಯ ಸಂಕೇತ. ಇನ್ನು ಕಳೆದ ಕೆಲವು ವರ್ಷಗಳಿಂದ ಸಿರಾಜ್ ಮತ್ತು ಶಮಿ ಉತ್ತಮವಾಗಿಯೇ ಬೌಲಿಂಗ್ ನಿಭಾಯಿಸುತ್ತಿದ್ದಾರೆ. ಆದ್ದರಿಂದ ಅವರೆಲ್ಲರೂ ಮುಂದಿನ ಎರಡು ತಿಂಗಳು ತಂಡಕ್ಕೆ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲಿದ್ದಾರೆ" ಎಂದು ರೋಹಿತ್ ಬೌಲಿಂಗ್ ಕ್ಷೇತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದರು.
ವಿಶ್ವಕಪ್ ಹಿನ್ನೆಲೆಯಲ್ಲಿ ಏಷ್ಯಾಕಪ್ ಅನ್ನು ಫಿಟ್ನೆಸ್ ಪರೀಕ್ಷೆಯ ವೇದಿಕೆಯ ರೀತಿ ನೋಡುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. "ಯಾವುದೇ ರೀತಿಯಿಂದಲೂ ಈ ಪಂದ್ಯಾವಳಿಯು ಫಿಟ್ನೆಸ್ ಪರೀಕ್ಷೆಯಲ್ಲ. ಏಷ್ಯಾ ಕಪ್ ಅನ್ನು ಏಷ್ಯಾದ ಆರು ಅಗ್ರ ತಂಡಗಳ ನಡುವೆ ಆಡಿಸಲಾಗುತ್ತದೆ. ಈ ಕಪ್ಗೆ ಶ್ರೀಮಂತ ಇತಿಹಾಸವಿದೆ. ಇದು ಬಹಳ ದೊಡ್ಡ ಟೂರ್ನಿ" ಎಂದು ರೋಹಿತ್ ಶರ್ಮಾ ಹೇಳಿದರು.
ಇದನ್ನೂ ಓದಿ:ಏಷ್ಯಾಕಪ್: ಭಾರತ-ಪಾಕ್ ಹೈವೋಲ್ಟೇಜ್ ಮ್ಯಾಚ್ಗೆ ಮಳೆ ಆತಂಕ, ಪಂದ್ಯ ರದ್ದಾದರೆ ಏನಾಗುತ್ತೆ?