ಮುಂಬೈ:ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ಹಾಗೂ ವೇಟ್ಲಿಫ್ಟಿಂಗ್ನಲ್ಲಿ 21 ವರ್ಷಗಳ ಬಳಿಕ ಪದಕ ತಂದುಕೊಟ್ಟ ಮೀರಾಬಾಯಿ ಚನು ಬುಧವಾರ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿದ್ದಾರೆ.
ಇಂದು ಬೆಳಗ್ಗೆ ಪ್ರೀತಿ ಪಾತ್ರರಾದ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿದೆ. ಅವರ ವಿವೇಕಯುತ ಮತ್ತು ಪ್ರೇರಣಾತ್ಮಕ ಮಾತುಗಳು ಸದಾ ನನ್ನಲ್ಲಿ ಉಳಿದಿರುತ್ತವೆ. ಅವರು ನಿಜಕ್ಕೂ ಸ್ಪೂರ್ತಿ ಎಂದು 49 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಭಾರತದ ಶ್ರೇಷ್ಠ ಕ್ರಿಕೆಟಿಗ ಸಚಿನ್, ನಿಮ್ಮನ್ನು ಇಂದು ಬೆಳಗ್ಗೆ ಭೇಟಿ ಮಾಡಿದ್ದು, ನಿಮ್ಮಷ್ಟೇ ನನಗೂ ಸಂತೋಷ ತಂದಿದೆ ಮೀರಾಬಾಯಿ ಚನು, ಮಣಿಪುರದಿಂದ ಟೋಕಿಯೋವರೆಗೆ ನಿಮ್ಮ ಸ್ಪೂರ್ತಿಯುತ ಪಯಣದ ಬಗ್ಗೆ ಮಾತನಾಡಿದ್ದು, ಅದ್ಭುತವಾಗಿತ್ತು. ನೀವು ಮುಂದಿನ ದಿನಗಳಲ್ಲಿ ಹೋಗಬೇಕಾಗಿರುವ ಸ್ಥಳಗಳು(ಸ್ಪರ್ಧೆಗಳು) ಸಾಕಷ್ಟಿವೆ, ಕಠಿಣ ಶ್ರಮವನ್ನು ಮುಂದುವರಿಸಿ ಎಂದು ಸಚಿನ್ ಶುಭ ಹಾರೈಸಿದ್ದಾರೆ.
ಇಬ್ಬರು ಶ್ರೇಷ್ಠ ಕ್ರೀಡಾಪಟುಗಳ ಸಮ್ಮಿಲನ ಮತ್ತು ಪರಸ್ಪರ ಗೌರವ ನೀಡಿದ ಈ ಕ್ಷಣವನ್ನು ಕಣ್ತುಂಬಿಕೊಂಡಿರುವ ಟ್ವಿಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೀರಾಬಾಯಿ ಚನು ಭಾರತಕ್ಕೆ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ತಂದುಕೊಟ್ಟ 2ನೇ ಮಹಿಳಾ ಅಥ್ಲೀಟ್ ಆಗಿದ್ದಾರೆ. 2016ರ ರಿಯೋ ಒಲಿಂಪಿಕ್ಸ್ನಲ್ಲಿ ಪಿವಿ ಸಿಂಧು ಮೊದಲು ಬೆಳ್ಳಿ ಪದಕ ಗೆದ್ದಿದ್ದರು.
ಇದನ್ನು ಓದಿ:ನೀರಜ್ ಸಾಧನೆಯ ನೆನಪಿಗೆ ಆಗಸ್ಟ್ 7ರಂದು ಜಾವಲಿನ್ ಥ್ರೋ ದಿನಾಚರಣೆಗೆ AFI ನಿರ್ಧಾರ