ಹರಾರೆ:ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಕ್ವಾಲಿಫೈಯರ್ಸ್‌ನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಒಮಾನ್ ವಿರುದ್ಧ ನೆದರ್ಲ್ಯಾಂಡ್ಸ್ ಗೆಲುವು ದಾಖಲಿಸುವ ಮೂಲಕ ವಿಶ್ವಕಪ್ ಅರ್ಹತೆಯ ಕನಸು ಜೀವಂತವಾಗಿರಿಸಿಕೊಂಡಿದೆ. ಸೋಮವಾರ ನಡೆದ ಪಂದ್ಯದಲ್ಲಿ ನೆದರ್ಲಾಂಡ್ಸ್ ತಂಡ ಒಮಾನ್ ಅನ್ನು ಡಕ್ವರ್ತ್ ಲೂಯಿಸ್ ನಿಯಮದಡಿ 74 ರನ್‌ಗಳಿಂದ ಮಣಿಸಿತು.
ಮಳೆಯಿಂದಾಗಿ 48 ಓವರ್‌ಗಳಿಗೆ ಕಡಿತಗೊಂಡ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗಿಳಿದ ನೆದರ್ಲ್ಯಾಂಡ್ಸ್ 48 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 362 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕ ಆಟಗಾರ ವಿಕ್ರಮಜೀತ್ ಸಿಂಗ್ 109 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್‌ಸಮೇತ 110 ರನ್ಗಳಿಸುವ ಮೂಲಕ ಶತಕ ಸಿಡಿಸಿದರು. ಮತ್ತೊಂದೆಡೆ, ವೆಸ್ಲಿ ಬರೇಸಿ ಬಿರುಸಿನ ಆಟವಾಡಿ 65 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಮೇತ 97 ರನ್‌ಗಳ ಕಲೆಹಾಕಿ ಶತಕ ವಂಚಿತರಾದರು.
ಮತ್ತೆ ಮಳೆ ಸುರಿದ ಕಾರಣ ಪಂದ್ಯವನ್ನು 44 ಓವರ್‌ಗಳಿಗೆ ಕಡಿತಗೊಳಿಸಿ 321 ರನ್‌ಗಳ ಗುರಿ ನೀಡಲಾಯಿತು. ಬೃಹತ್ ಮೊತ್ತವನ್ನು ಬೆನ್ನತ್ತಿದ ಒಮಾನ್ 44 ಓವರ್‌ಗಳಲ್ಲಿ 6 ವಿಕೆಟ್‌ಗೆ 246 ರನ್ ಗಳಿಸಲಷ್ಟೇ ಶಕ್ತವಾಯಿತು. ಒಮಾನ್ ಪರ ಅಯಾನ್ ಖಾನ್ 92 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಮೇತೆ 105 ರನ್ ಕಲೆಹಾಕಿ ಅಜೇಯರಾಗುಳಿದರು. ಶೋಯೆಬ್ ಖಾನ್ 60 ಎಸೆತದಲ್ಲಿ 5 ಬೌಂಡರಿ ಸಮೇತ 47 ರನ್ ಪೇರಿಸಿದರು.
ವಿಶ್ವಕಪ್ ಅರ್ಹತೆ: ಈಗಾಗಲೇ ಶ್ರೀಲಂಕಾ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಇನ್ನೊಂದೆಡೆ, ಜಿಂಬಾಬ್ವೆ, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಎರಡನೇ ಸ್ಥಾನದ ರೇಸ್‌ನಲ್ಲಿವೆ. ಸ್ಕಾಟ್ಲೆಂಡ್ ವಿರುದ್ಧದ ಅಂತಿಮ ಸೂಪರ್ ಸಿಕ್ಸ್ ಪಂದ್ಯದಲ್ಲಿ ಇಂದು ಜಿಂಬಾಬ್ವೆ ಗೆಲುವು ಸಾಧಿಸಿದರೆ, ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸ್ಕಾಟ್ಲೆಂಡ್ ಗೆದ್ದರೆ ಜಿಂಬಾಬ್ವೆ ಅರ್ಹತೆ ಹಾದಿ ಕಠಿಣ. ಮತ್ತೊಂದೆಡೆ ನೆದರ್ಲ್ಯಾಂಡ್ಸ್ 4 ಅಂಕಗಳನ್ನು ಪಡೆದುಕೊಂಡಿದ್ದು, ಮುಂದಿನ ಪಂದ್ಯ ಸ್ಕಾಟ್ಲೆಂಡ್ ವಿರುದ್ಧ ಆಡಲಿದೆ. ಸ್ಕಾಟ್ಲೆಂಟ್ ತನ್ನ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ಗಳ ಗೆಲುವು ದಾಖಲಿಸಿದ್ದು, ಜಿಂಬಾಬ್ವೆ ವಿರುದ್ದವು ಗೆಲ್ಲುವ ವಿಶ್ವಾಸ ಹೊಂದಿದೆ. ಜೂ. 6ರಂದು ನೆದರ್ಲ್ಯಾಂಡ್ಸ್ ಮತ್ತು ಸ್ಕಾಟ್ಲೆಂಡ್ ನಡುವಿನ ಪಂದ್ಯದ ಫಲಿತಾಂಶದ ಬಳಿಕವಷ್ಟೇ ಎರಡನೇ ಸ್ಥಾನ ನಿರ್ಧಾರವಾಗಲಿದೆ.
ಇದನ್ನೂ ಓದಿ:ರಾಷ್ಟ್ರೀಯ ತಂಡದಲ್ಲಿ ಆಡಲು ನಿರಾಸಕ್ತಿ: ಲೀಗ್ಗಳಲ್ಲಿ ಹೆಚ್ಚು ಸಂಪಾದನೆ ಪಡೆಯುತ್ತಿರುವ ಕೆರಿಬಿಯನ್ ಆಟಗಾರರು