ಬುಲವಾಯೊ (ಜಿಂಬಾಬ್ವೆ): ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಸೂಪರ್ ಸಿಕ್ಸ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ನಿಧಾನಗತಿಯ ಓವರ್ ರೇಟ್ಗಾಗಿ ಒಮನ್ ತಂಡಕ್ಕೆ ಐಸಿಸಿ ಪಂದ್ಯ ಶುಲ್ಕದ ಶೇ 40 ರಷ್ಟು ದಂಡ ಹಾಕಿದೆ. ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಆಟಗಾರರು ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲರಾದ ಪ್ರತಿ ಓವರ್‌ಗೆ ಅವರ ಪಂದ್ಯ ಶುಲ್ಕದ 20 ಪ್ರತಿಶತ ದಂಡ ವಿಧಿಸಲಾಗುತ್ತದೆ. ಕ್ಯಾಪ್ಟನ್ ಜೀಶಾನ್ ಮಕ್ಸೂದ್ ಅವರು ನಿಧಾನಗತಿಯ ಓವರ್ ರೇಟ್ ಮತ್ತು ದಂಡಕ್ಕೆ ಒಪ್ಪಿಗೆ ನೀಡಿದ್ದಾರೆ. ಆದ್ದರಿಂದ, ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.
ಕಲೀಮುಲ್ಲಾಗೆ ವಾಗ್ದಂಡನೆ:ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯ ಹಂತ 1 ರ ಉಲ್ಲಂಘನೆಗಾಗಿ ಒಮನ್ ಆಟಗಾರ ಕಲೀಮುಲ್ಲಾಗೆ ವಾಗ್ದಂಡನೆ ವಿಧಿಸಲಾಗಿದೆ. ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಕಲೀಮುಲ್ಲಾ ಉಲ್ಲಂಘಿಸಿರುವುದು ಕಂಡುಬಂದಿದೆ. "ಅಂತಾರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಔಟಾದ ಮೇಲೆ ಬ್ಯಾಟರ್‌ನನ್ನು ಕೆರಳಿಸುವ ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದು ಆಕ್ರಮಣಕಾರಿ ನಡೆ" ಎಂದು ಪರಿಗಣಿಸಲಾಗಿದೆ. ಇದರ ಜೊತೆಗೆ, ಕಲೀಮುಲ್ಲಾ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ.
ಜಿಂಬಾಬ್ವೆಯ ಇನಿಂಗ್ಸ್‌ನ 12ನೇ ಓವರ್‌ನಲ್ಲಿ ಘಟನೆ ಸಂಭವಿಸಿದೆ. ಜಿಂಬಾಬ್ವೆ ನಾಯಕ ಕ್ರೇಗ್ ಎರ್ವಿನ್ ಅವರ ವಿಕೆಟ್ ಬಿದ್ದಾಗ ಕಲೀಮುಲ್ಲಾ ಜೋರಾಗಿ ಸಂಭ್ರಮಾಚರಣೆ ಮಾಡಿದ್ದಲ್ಲದೇ, ಪೆವಿಲಿಯನ್ ಕಡೆಗೆ ಹೋಗುತ್ತಿದ್ದ ಬ್ಯಾಟರ್ ಜೊತೆಗೆ ಅನುಚಿತವಾಗಿ ನಡೆದುಕೊಂಡರು. ಕಲೀಮುಲ್ಲಾ ಸಹ ಇದನ್ನು ಒಪ್ಪಿಕೊಂಡಿದ್ದರಿಂದ ವಿಚಾರಣೆ ನಡೆಸದೇ ವಾಗ್ದಂಡನೆ ನೀಡಲಾಗಿದೆ. ಆನ್-ಫೀಲ್ಡ್ ಅಂಪೈರ್‌ಗಳಾದ ರೋಲ್ಯಾಂಡ್ ಬ್ಲ್ಯಾಕ್ ಮತ್ತು ವೇಯ್ನ್ ನೈಟ್ಸ್, ಮೂರನೇ ಅಂಪೈರ್ ಆಸಿಫ್ ಯಾಕೂಬ್ ಮತ್ತು ನಾಲ್ಕನೇ ಅಂಪೈರ್ ಮಾರ್ಟಿನ್ ಸಾಗರ್ಸ್ ಅವರು ಕಲೀಮುಲ್ಲಾ ವಿರುದ್ಧ ಆರೋಪ ಮಾಡಿದ್ದಾರೆ.