ಕರ್ನಾಟಕ

karnataka

ETV Bharat / sports

ಕಿವೀಸ್​ ಗೆಲ್ಲಬೇಕು, ಭಾರತದ ಎದುರು ಸೆಮೀಸ್​ ಆಡಬೇಕು: ಚಿನ್ನಸ್ವಾಮಿಯಲ್ಲಿ ಅಭಿಮಾನಿಗಳ ಆಶಯ - ಏಕದಿನ ವಿಶ್ವಕಪ್

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಪಂದ್ಯವಲ್ಲದಿದ್ದರೂ ಅಭಿಮಾನಿಗಳಿಗೆ ಕೊರತೆಯಿಲ್ಲ. ನ್ಯೂಜಿಲ್ಯಾಂಡ್​ ಮತ್ತು ಶ್ರೀಲಂಕಾ ಪಂದ್ಯಕ್ಕೆ ಕರ್ನಾಟಕದ ಅಭಿಮಾನಿಗಳ ಬೆಂಬಲ ಹೇಗಿದೆ ಎಂಬುದನ್ನು 'ಈಟಿವಿ ಭಾರತ'ದ ಪ್ರತಿನಿಧಿ ನಿಖಿಲ್​ ಬಾಪಟ್​ ಅವರು ಇಲ್ಲಿ ವಿವರಿಸಿದ್ದಾರೆ.

ಏಕದಿನ ವಿಶ್ವಕಪ್
ಏಕದಿನ ವಿಶ್ವಕಪ್

By ETV Bharat Karnataka Team

Published : Nov 9, 2023, 5:41 PM IST

ಬೆಂಗಳೂರು:ಭಾರತದಲ್ಲಿ ಸದ್ಯದ ಜನಪ್ರಿಯ ಕ್ರೀಡೆ ಅಂದ್ರೆ ಅದು ಕ್ರಿಕೆಟ್​. ವಿಶ್ವಕಪ್​​ನ ಆತಿಥ್ಯ ವಹಿಸಿರುವ ದೇಶದ ತಂಡ ಕೂಡ ಭರ್ಜರಿಯಾಗಿ ಮುನ್ನುಗ್ಗಿ ಸೆಮಿಫೈನಲ್​ ತಲುಪಿದೆ. ಕ್ರೀಡಾಂಗಣಗಳು ಕೂಡ ಹೆಚ್ಚೂ ಕಡಿಮೆ ಜನರಿಂದ ಭರ್ತಿಯಾಗುತ್ತಿವೆ. ಅದು ಭಾರತ ತಂಡವೇ ಆಗಿರಲಿ ಅಥವಾ ಬೇರೆ ದೇಶವೇ ಆಗಿದ್ದರೂ, ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ಕೊರತೆಯಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್​​ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಇದಕ್ಕೆ ಸಾಕ್ಷಿ.

ಭಾರತ ಇಲ್ಲಿ ಇನ್ನು ಒಂದೂ ವಿಶ್ವಕಪ್ ಪಂದ್ಯ ಆಡಿಲ್ಲ. ಆದರೂ, ಬೇರೆ ತಂಡಗಳಿಗೆ ಜನರು ಭರ್ಜರಿಯಾಗಿ ಬೆಂಬಲ ನೀಡುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬರುವ ಕ್ರಿಕೆಟ್​ ಪ್ರಿಯರು ವಿದೇಶಿ ತಂಡಗಳನ್ನು ಚಿಯರ್​ ಮಾಡುತ್ತಾರೆ. ಕಿವೀಸ್​ ಮತ್ತು ಲಂಕಾ ಪಂದ್ಯಕ್ಕೂ ಜನರು ಕ್ರೀಡಾಂಗಣದಲ್ಲಿ ಭರ್ತಿಯಾಗಿದ್ದು, ಅದರಲ್ಲಿ ಬ್ಲ್ಯಾಕ್​​ಕ್ಯಾಪ್ಸ್​ ತಂಡಕ್ಕೆ ಸಪೋರ್ಟ್​ ಮಾಡುತ್ತಿದ್ದಾರೆ.

ಕಿವೀಸ್​ ಗೆಲ್ಲಬೇಕು:ನ್ಯೂಜಿಲೆಂಡ್‌ನ ಬೆಂಬಲಿಗ ರೋಹಿತ್ ಎಂಬುವರು ಈಟಿವಿ ಭಾರತ್​ ಜೊತೆ ಮಾತನಾಡಿ, ಕಿವೀಸ್​ ತಂಡ ಲಂಕಾ ವಿರುದ್ಧ ಗೆದ್ದು ಸೆಮಿಫೈನಲ್‌ಗೆ ಅರ್ಹತೆ ಪಡೆಯಬೇಕು. ಅಹಮದಾಬಾದ್‌ನಲ್ಲಿ ಭಾರತದ ವಿರುದ್ಧ ಆಡಬೇಕು ಎಂಬುದು ನನ್ನ ಬಯಕೆ. ಅಲ್ಲಿ ಭಾರತವನ್ನು ಸೋಲಿಸಿ ವಿಶ್ವಕಪ್​ ಎತ್ತಿ ಹಿಡಿದರೂ ನಾನು ಸಂತೋಷಪಡುವೆ ಎಂದು ಹೇಳಿದರು.

6 ವರ್ಷಗಳ ಕಾಲ ನಾನು ನ್ಯೂಜಿಲ್ಯಾಂಡ್​ನಲ್ಲಿ ನೆಲೆಸಿದ್ದೆ. ನ್ಯೂಜಿಲೆಂಡ್ ಉತ್ತಮ ತಂಡವಾಗಿರುವುದರಿಂದ ಟೂರ್ನಿಯಲ್ಲಿ ಅದಕ್ಕೆ ಬೆಂಬಲ ನೀಡುತ್ತಿದ್ದೇನೆ. ಭಾರತದಲ್ಲಿ ಕ್ರೀಡಾ ಸಂಸ್ಕೃತಿಗೇನು ಕಮ್ಮಿ ಇಲ್ಲ ಎಂದು ಇನ್ನೊಬ್ಬ ಅಭಿಮಾನಿ ಸಮೀರ್ ನಾರಾಯಣ್ ಹೇಳಿದರು. ಕಿವೀಸ್​ನ ಕೇನ್ ವಿಲಿಯಮ್ಸನ್ ಮತ್ತು ರಚಿನ್ ರವೀಂದ್ರ ಅವರನ್ನು ಇಷ್ಟಪಡುತ್ತೇನೆ. ಹಾಗಾಗಿ ಆ ತಂಡಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದರು.

ಮೈದಾನದ ಹೊರಗೆ ವಿರಾಟ್​, ಕೊಹ್ಲಿ:ಮೈದಾನದೊಳಗೆ ಲಂಕಾ- ಕಿವೀಸ್​ ಪಂದ್ಯವಾಡುತ್ತಿದ್ದರೆ, ಹೊರಗೆ ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಮತ್ತು ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿಯ ಟೀಶರ್ಟ್​ಗಳು ರಾರಾಜಿಸುತ್ತಿದ್ದವು. ಪ್ರತಿ ಟೀಶರ್ಟ್​ಗೆ 250 ರೂಪಾಯಿ ಬೆಲೆ ಇದ್ದು, ಭರ್ಜರಿಯಾಗಿ ಬಿಕರಿ ಕಾಣುತ್ತಿವೆ. ಅಭಿಮಾನಿಗಳು ಉತ್ಸಾಹದಿಂದಲೇ ಖರೀದಿ ಮಾಡುತ್ತಿದ್ದಾರೆ ಎಂದು ಮಾರಾಟಗಾರರೊಬ್ಬರು ತಿಳಿಸಿದರು.

ಇದರ ಜೊತೆಗೆ ಕರ್ನಾಟಕದ ಅಭಿಮಾನಿಗಳು ನ್ಯೂಜಿಲೆಂಡ್ ತಂಡದ ಟಿ-ಶರ್ಟ್ ಧರಿಸಿರುವುದು ಕಂಡು ಬಂದಿತು. ಭಾರತೀಯ ಅದರಲ್ಲೂ ಬೆಂಗಳೂರು ಮೂಲದ ಆಲ್​ರೌಂಡರ್ ರಚಿನ್​ ರವೀಂದ್ರ ಬೌಲಿಂಗ್ ಮಾಡಲು ಬಂದಾಗ ಅಭಿಮಾನಿಗಳು ರಚಿನ್ ರಚಿನ್ ಎಂದು ಕೂಗಿದರು.

ಸೆಮಿಫೈನಲ್‌ ಪ್ರವೇಶಿಸಲು ನ್ಯೂಜಿಲೆಂಡ್‌ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ತಂಡ ಉತ್ತಮವಾಗಿ ಆಟವಾಡುತ್ತಿದೆ. ಈಗಾಗಲೇ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು ಸೆಮೀಸ್​ ತಲುಪಿದ್ದು ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಉತ್ತಮ ರನ್​ರೇಟ್​ನಿಂದ ಕಿವೀಸ್​ ಗೆದ್ದಲ್ಲಿ ರೇಸ್​ನಲ್ಲಿರುವ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಟೂರ್ನಿಯಿಂದ ಹೊರ ಬೀಳಲಿವೆ.

ಭಾನುವಾರ ಭಾರತದ ಪಂದ್ಯ:ಆತಿಥೇಯ ಭಾರತ ತಂಡ ಬೆಂಗಳೂರಿನಲ್ಲಿ ತನ್ನ ಕೊನೆಯ ಲೀಗ್​ ಪಂದ್ಯವನ್ನು ನವೆಂಬರ್​ 12 ರಂದು (ಭಾನುವಾರ) ಕ್ರಿಕೆಟ್​ ಶಿಶು ನೆದರ್​ಲ್ಯಾಂಡ್ಸ್​ ವಿರುದ್ಧ ಆಡಲಿದೆ. ಮೊದಲ ತಂಡವಾಗಿ ಸೆಮೀಸ್​ ಸೇರಿರುವ ಭಾರತಕ್ಕಿದು ಔಪಚಾರಿಕ ಪಂದ್ಯವಾಗಿರಲಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿಂದು ವಿಶ್ವಕಪ್‌ ಸೆಮಿ ಫೈನಲ್‌ಗೆ ಕಿವೀಸ್, ಚಾಂಪಿಯನ್ಸ್ ಟ್ರೋಫಿ ಅರ್ಹತೆಗೆ ಲಂಕಾ ಬಿಗ್​ ಫೈಟ್

ABOUT THE AUTHOR

...view details