ಲಖನೌ(ಉತ್ತರಪ್ರದೇಶ) :ಮೊದಲ ಪಂದ್ಯದಲ್ಲಿ ಲಂಕಾ ದಹನ ಮಾಡಿದ್ದ ದಕ್ಷಿಣ ಆಫ್ರಿಕಾ, ಎರಡನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಇಂದು 134 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಾಂಗರೂ ಪಡೆ ವಿಶ್ವಕಪ್‌ನಲ್ಲಿ ಸತತ ಎರಡನೇ ಸೋಲು ಕಂಡಿತು. ಪಾಯಿಂಟ್ ಪಟ್ಟಿಯಲ್ಲಿ ಹರಿಣಗಳು ಟಾಪ್ಗೆ ಬಂದರೆ, ಆಸೀಸ್ ಕೊನೆಯ ಎರಡನೇ ಸ್ಥಾನಕ್ಕೆ ಕುಸಿಯಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿಕಾಕ್ ಶತಕ ಐಡನ್ ಮಾರ್ಕ್ರಮ್ ಅರ್ಧಶತಕದ ನೆರವಿನಿಂದ 7 ವಿಕೆಟ್ಗೆ 311 ರನ್ಗಳ ಸವಾಲು ನೀಡಿತು. ಇದನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 177 ರನ್ಗೆ ಆಲೌಟ್ ಆಗಿ 134 ರನ್ಗಳಿಂದ ಮಂಡಿಯೂರಿತು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ 40 ವರ್ಷಗಳ ಬಳಿಕ ದೊಡ್ಡ ಮೊತ್ತದ ಸೋಲು ಅನುಭವಿಸಿತು. 1983 ರಲ್ಲಿ 118 ರನ್ಗಳಿಂದ ಸೋಲು ಕಂಡಿತ್ತು.
ಅರ್ಧಶತಕವೂ ಗಳಿಸದ ಆಸೀಸ್ ಬ್ಯಾಟರ್ಸ್:ವಿಶ್ವಕಪ್ಗೂ ಮುನ್ನ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಸತತ ಸೋಲು ಕಂಡಿದ್ದ ಆಸೀಸ್, ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಆಟ ಮುಂದುವರಿಸಿತು. ಯಾವೊಬ್ಬ ಬ್ಯಾಟರ್ ಕೂಡ ಅರ್ಧಶತಕ ಕೂಡ ದಾಖಲಿಸಲಿಲ್ಲ. ಮಾರ್ನಸ್ ಲಬುಶೇನ್ 46 ರನ್ ಗಳಿಸಿದ್ದೇ ತಂಡದ ಆಟಗಾರನ ಅತ್ಯಧಿಕ ಮೊತ್ತ. 70 ರನ್ಗೆ ಅಗ್ರ ಕ್ರಮಾಂಕದ 6 ಬ್ಯಾಟರ್ಗಳು ಪೆವಿಲಿಯನ್ ಸೇರಿದರು.
ಕಾಂಗರೂ ಪಡೆಯ ವಿರುದ್ಧ ಆರಂಭದಿಂದಲೇ ದಂಡೆತ್ತಿ ಹೋದ ಆಫ್ರಿಕಾದ ಬೌಲರ್ಗಳು ಯಾವ ಹಂತದಲ್ಲೂ ಜೊತೆಯಾಟ ಕಟ್ಟದಂತೆ ನೋಡಿಕೊಂಡರು. ತಂಡದ ಪ್ರಮುಖ ಬ್ಯಾಟರ್ಗಳಾದ ಮಿಚೆಲ್ ಮಾರ್ಸ್ 7, ಡೇವಿಡ್ ವಾರ್ನರ್ 13, ಸ್ಟೀವನ್ ಸ್ಮಿತ್ 19, ಗ್ಲೆನ್ ಮ್ಯಾಕ್ಸ್ವೆಲ್ 3, ಮಾರ್ಕಸ್ ಸ್ಟೊಯಿನೀಸ್ 5 ರನ್ಗೆ ವಿಕೆಟ್ ನೀಡಿದ್ದು, ಕುಸಿತಕ್ಕೆ ಕಾರಣವಾಯಿತು.