ಲಖನೌ (ಉತ್ತರ ಪ್ರದೇಶ):ಇಲ್ಲಿನ ಎಕಾನಾ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ವೇಗಿ ಮೊಹಮ್ಮದ್ ಶಮಿ ಅವರು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಅಲನ್ ಡೊನಾಲ್ಡ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಟೀಂ ಇಂಡಿಯಾ ನೀಡಿದ್ದ 230 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 129 ರನ್‌ಗಳಿಗೆ ಆಲೌಟಾಗಿ ಸೋಲು ಕಂಡಿತು.
ವಿಶ್ವಕಪ್‌ನಲ್ಲಿ ಸತತ 6 ಗೆಲುವು ದಾಖಲಿಸಿದ ರೋಹಿತ್ ನೇತೃತ್ವದ ತಂಡ ಸೆಮೀಸ್ನಲ್ಲಿ ಬಹುತೇಕ ಸ್ಥಾನ ಪಡೆದುಕೊಂಡಿದೆ. ಆದರೆ ನಂ.1 ತಂಡವಾಗಿಯೇ ಉಳಿಯುತ್ತದೆಯೇ ಎಂಬುದು ಮುಂದಿನ ಪಂದ್ಯಗಳ ಗೆಲುವಿನಿಂದ ನಿರ್ಧಾರವಾಗಲಿದೆ. ಇನ್ನೊಂದೆಡೆ, 6 ಪಂದ್ಯಗಳ ಪೈಕಿ 5ರಲ್ಲಿ ಸೋಲುಂಡಿರುವ ಇಂಗ್ಲೆಂಡ್ ಸೆಮೀಸ್ ರೇಸ್ನಿಂದ ಬಹುತೇಕ ಹೊರಬಿದ್ದಿದೆ. ಇಂಗ್ಲೆಂಡ್ ಉಳಿದಿರುವ ಮೂರು ಪಂದ್ಯಗಳನ್ನು ಚಾಂಪಿಯನ್ಸ್ ಟ್ರೋಫಿಯ ಅರ್ಹತೆಗಾಗಿ ಆಡಬೇಕಿದೆ.
ಮೊಹಮ್ಮದ್ ಶಮಿ 22 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದರು. ಶಮಿ ಅವರ ಕರಾರುವಾಕ್ ದಾಳಿಗೆ ಮಂಡಿಯೂರಿದ ಆಂಗ್ಲರು 100 ರನ್‌ಗಳಿಂದ ಸೋಲು ಅನುಭವಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಾಯಕ ರೋಹಿತ್ ಶರ್ಮಾ ಅವರ 87 ರನ್‌ಗಳ ಸಹಾಯದಿಂದ 9 ವಿಕೆಟ್ ನಷ್ಟಕ್ಕೆ 229 ರನ್ ಕಲೆಹಾಕಿತು. ಇದಾದ ನಂತರ 35 ಓವರ್‌ಗಳಲ್ಲಿ ಕೇವಲ 129 ರನ್‌ಗಳಿಗೆ ಎದುರಾಳಿ ಭಾರತ ಕಟ್ಟಿಹಾಕಿ ಜಯಶಾಲಿಯಾಯಿತು.
ಪಂದ್ಯದಲ್ಲಿ ಮಿಂಚಿದ ಶಮಿ ವೈಟ್-ಲೈಟ್ನಿಂಗ್ ಎಂದು ಕರೆಯಲ್ಪಡುವ ದಕ್ಷಿಣ ಆಫ್ರಿಕಾದ ದಂತಕಥೆ ಅಲನ್ ಡೊನಾಲ್ಡ್ ಅವರನ್ನು ಹಿಂದಿಕ್ಕಿದರು. ಸದ್ಯ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಆಡಿದ ಎರಡು ಪಂದ್ಯಗಳಿಂದ ಶಮಿ 9 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ನ್ಯೂಜಿಲೆಂಡ್ ವಿರುದ್ಧ ಐದು ವಿಕೆಟ್ (5/54) ಮತ್ತು ಭಾನುವಾರ 4 ವಿಕೆಟ್ ಕಿತ್ತರು.
ಡೊನಾಲ್ಡ್ ಏಕದಿನ ವಿಶ್ವಕಪ್‌ನಲ್ಲಿ 22 ಪಂದ್ಯಗಳಿಂದ 38 ವಿಕೆಟ್‌ಗಳನ್ನು ಪಡೆದಿದ್ದರು. ಮೊಹಮ್ಮದ್ ಶಮಿ ವಿಶ್ವಕಪ್‌ನಲ್ಲಿ ಆಡಿದ 13 ಪಂದ್ಯಗಳಿಂದ 40 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಶಮಿ ಈಗ 40 ವಿಕೆಟ್‌ಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಜೊತೆಗೆ ಪಟ್ಟಿಯಲ್ಲಿ ಜಂಟಿ 11ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಮಾಜಿ ಬೌಲರ್ಗಳಾದ ಜಹೀರ್ ಖಾನ್ (23 ಪಂದ್ಯಗಳಿಂದ 44 ವಿಕೆಟ್) ಮತ್ತು ಜಾವಗಲ್ ಶ್ರೀನಾಥ್ (34 ಪಂದ್ಯಗಳಿಂದ 44 ವಿಕೆಟ್) ಇದ್ದಾರೆ.
2023ರ ವಿಶ್ವಕಪ್‌ನಲ್ಲಿ ಭಾರತ ಮುಂದೆ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ವಿರುದ್ಧ ಲೀಗ್ ಹಂತದಲ್ಲಿ ಆಡಲಿದೆ. ಈ ಪಂದ್ಯಗಳಲ್ಲಿ ಶಮಿ ಇದೇ ಫಾರ್ಮ್ ಮುಂದುವರೆಸಿದಲ್ಲಿ ಮಾಜಿ ಬೌಲರ್ಗಳ ದಾಖಲೆ ಮುರಿಯುವ ಸಾಧ್ಯತೆ ದಟ್ಟವಾಗಿದೆ. 42 ಪಂದ್ಯಗಳಿಂದ 71 ವಿಕೆಟ್ ಪಡೆದಿರುವ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್ ಅಗ್ರಸ್ಥಾನದಲ್ಲಿದ್ದರೆ, ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ 68 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ಸೋತರೂ ಬಟ್ಲರ್ ತಂಡ ಬಲಿಷ್ಠ: ಮಾರ್ಗನ್ ಹೇಳಿಕೆ ತಳ್ಳಿ ಹಾಕಿದ ಇಂಗ್ಲೆಂಡ್ ಕೋಚ್