ನವದೆಹಲಿ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ವೇಳೆ ಭಾರತದಲ್ಲಿ ಈ ವರ್ಷ ಅಂತ್ಯಕ್ಕೆ ನಡೆಯುವ ವಿಶ್ವಕಪ್ನ ವೇಳಾ ಪಟ್ಟಿ ಪ್ರಕಟ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಇನ್ನೂ ಪ್ರಕಟವಾಗಿಲ್ಲ. ಕರಡು ವೇಳಾಪಟ್ಟಿಯ ಪ್ರಕಾರ ಭಾರತ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಏಕದಿನ ವಿಶ್ವಕಪ್ನ ಮೊದಲ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 15 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಗುಜರಾತ್ನ ಅಹಮದಾಬಾದ್ನಲ್ಲಿ ಭಾರತ ಕಣಕ್ಕಿಳಿಯಲಿದೆ ಎಂದು ಕರಡು ವೇಳಾಪಟ್ಟಿಯಲ್ಲಿ ಇದೆ.
"ಬಿಸಿಸಿಐ ಕರಡು ವೇಳಾಪಟ್ಟಿಯನ್ನು ಐಸಿಸಿಯೊಂದಿಗೆ ಹಂಚಿಕೊಂಡಿದೆ, ಮುಂದಿನ ವಾರದ ಆರಂಭದಲ್ಲಿ ಅಂತಿಮ ವೇಳಾಪಟ್ಟಿಯನ್ನು ಹೊರತರುವ ಮೊದಲು ಭಾಗವಹಿಸುವ ದೇಶಗಳಿಗೆ ಪ್ರತಿಕ್ರಿಯೆಗಾಗಿ ಕಳುಹಿಸಲಾಗಿದೆ" ಎಂದು ಸುದ್ದಿ ಮಾಧ್ಯಮ ಒಂದು ವರದಿ ಮಾಡಿದೆ.
ಆರಂಭಿಕ ಡ್ರಾಫ್ಟ್ ಪ್ರಕಾರ, ಪಂದ್ಯಾವಳಿಯು ಅಕ್ಟೋಬರ್ 5 ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಕಳೆದ ಆವೃತ್ತಿಯ ರನ್ನರ್ ಅಪ್ ತಂಡ ನ್ಯೂಜಿಲೆಂಡ್ ಅನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯವನ್ನು ಆಡಲಿದೆ. ನವೆಂಬರ್ 19 ರಂದು ಫೈನಲ್‌ಗೆ ಅದೇ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ನವೆಂಬರ್ 15 ಮತ್ತು 16 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳ ಸ್ಥಳಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ. 2011 ರಲ್ಲಿ ಸ್ವದೇಶದಲ್ಲಿ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ಆತಿಥೇಯ ಭಾರತ, ಕೋಲ್ಕತ್ತಾ, ಮುಂಬೈ, ನವದೆಹಲಿ ಮತ್ತು ಬೆಂಗಳೂರು ಸೇರಿದಂತೆ ಒಂಬತ್ತು ನಗರಗಳಲ್ಲಿ ಲೀಗ್ ಹಂತದ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 15 ರಂದು ಗುಜರಾತ್ನಲ್ಲಿ ಪಾಕಿಸ್ತಾನವನ್ನು ಭಾರತ ಎದುರಿಸಲಿದೆ ಎಂದು ಕರುಡು ಪ್ರತಿಯಲ್ಲಿ ತಿಳಿಸಲಾಗಿದೆ. ಆದರೆ ಇತ್ತೀಚೆಗೆ ಪಾಕಿಸ್ತಾನಕ್ಕೆ ಐಸಿಸಿ ನಿಯೋಗ ಭೇಟಿ ಕೊಟ್ಟಾಗ ಇಂಡಿಯಾ-ಪಾಕ್ ಪಂದ್ಯವನ್ನು ಗುಜರಾತ್ನಲ್ಲಿ ಆಡಿಸದಂತೆ ಮನವಿ ಮಾಡಿದ್ದರು ಎಂದಿತ್ತು.