ಕರ್ನಾಟಕ

karnataka

ETV Bharat / sports

ಐಸಿಸಿ ನೂತನ ಶ್ರೇಯಾಂಕ​: ಕೊಹ್ಲಿ ಮೀರಿಸಿದ ಪಾಕ್‌ ಕ್ರಿಕೆಟಿಗ, ಟಿ20ಯಲ್ಲಿ ಇಶಾನ್‌ ಕಿಶನ್‌ಗೆ ಬಡ್ತಿ - T20 ranking list

ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಟಿ20, ಏಕದಿನ, ಟೆಸ್ಟ್ ಬ್ಯಾಟರ್‌​, ಬೌಲಿಂಗ್​, ಆಲ್​ರೌಂಡರ್​ಗಳ ನೂತನ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆ ಮಾಡಿದೆ. ಪಾಕಿಸ್ತಾನದ ಇಮಾಮ್​ ಉಲ್​ ಹಕ್​ ವಿರಾಟ್​ ಕೊಹ್ಲಿಯನ್ನು ಹಿಂದಿಕ್ಕಿ ಜೀವನಶ್ರೇಷ್ಠ 2ನೇ ಸ್ಥಾನ ಪಡೆದಿದ್ದಾರೆ. ಕೊಹ್ಲಿ 3ನೇ ಕ್ರಮಾಂಕಕ್ಕೆ ಕುಸಿದಿದ್ದಾರೆ. ಟಿ20 ಪಟ್ಟಿಯಲ್ಲಿ ಇಶಾನ್ ಕಿಶನ್ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.

ಐಸಿಸಿ ನೂತನ ರ್ಯಾಂಕಿಂಗ್​ ಪಟ್ಟಿ
ಐಸಿಸಿ ನೂತನ ರ್ಯಾಂಕಿಂಗ್​ ಪಟ್ಟಿ

By

Published : Jun 15, 2022, 7:16 PM IST

ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚಿದ ಪಾಕಿಸ್ತಾನದ ಆಟಗಾರ ಇಮಾಮ್​ ಉಲ್​ ಹಕ್​ ಭಾರತದ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಹಿಂದಿಕ್ಕಿ ಏಕದಿನ ಬ್ಯಾಟರ್‌​ಗಳ ಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಸ್ಫೋಟಿಸುತ್ತಿರುವ ಇಶಾನ್​ ಕಿಶನ್​ 64 ಸ್ಥಾನ ಬಡ್ತಿ ಪಡೆದು ಟಿ20 ಶ್ರೇಯಾಂಕದಲ್ಲಿ 7ನೇ ಸ್ಥಾನ ಪಡೆದಿದ್ದಾರೆ.

ಕುಸಿದ ವಿರಾಟ್​:​ ಲಯ ಕಳೆದುಕೊಂಡಿರುವ ವಿರಾಟ್​ ಕೊಹ್ಲಿ ಏಕದಿನ ಬ್ಯಾಟರ್‌​ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಲ್ಲಿ ಪಾಕ್​ ಆಟಗಾರ ಇಮಾಮ್​ ಉಲ್​ ಹಕ್​ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ರ್ಯಾಂಕಿಂಗ್​ ಪಟ್ಟಿಯಲ್ಲೂ ಅವರಿಗೆ ನೆರವಾಗಿದ್ದು, ವಿರಾಟ್​ ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ, ಅಗ್ರಸ್ಥಾನದಲ್ಲಿರುವ ಬಾಬರ್​ ಅಜಂ ಕೂಡ ಪಾಕ್​ ಆಟಗಾರ. ಇಬ್ಬರು ಪಾಕ್​ ಆಟಗಾರರು ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ಜಸ್ಪ್ರೀತ್​ ಬೂಮ್ರಾ 5ನೇ ಸ್ಥಾನದಲ್ಲಿ ಮುಂದುವರಿದಿದ್ದು, ನ್ಯೂಜಿಲ್ಯಾಂಡ್​ನ ಟ್ರೆಂಟ್​ ಬೌಲ್ಟ್​ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಶಕೀಬ್​ ಅಲ್​ ಹಸನ್​ ಮೊದಲ ಸ್ಥಾನದಲ್ಲಿದ್ದಾರೆ.

ಇಶಾನ್ ಕಿಶನ್​ ಟಾಪ್​ 7:ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಇಶಾನ್​ ಕಿಶನ್​ ನೂತನ ಟಿ20 ರ‍್ಯಾಂಕಿಂಗ್‌​ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದಾರೆ. ಅಲ್ಲದೇ, ಅಗ್ರ 10 ರಲ್ಲಿರುವ ಭಾರತದ ಏಕೈಕ ಬ್ಯಾಟರ್​ ಆಗಿದ್ದಾರೆ.

ಇಶಾನ್​ ಕಿಶನ್​ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳಲ್ಲಿ 2 ಅರ್ಧಶತಕ ಸಮೇತ 164 ರನ್​ ಗಳಿಸಿದ್ದಾರೆ. ಇದು ಅವರ ರ‍್ಯಾಂಕಿಂಗ್‌​ ಏರಿಕೆಗೆ ಕಾರಣವಾಗಿದೆ. 64 ಸ್ಥಾನ ಹೆಚ್ಚಳ ಕಂಡಿದ್ದಾರೆ.

ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಮ್​ ಇಲ್ಲಿಯೂ ಕೂಡ ನಂ.1 ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಐಡೆನ್​ ಮಾರ್ಕ್ರಮ್​ರನ್ನು ಹಿಂದಿಕ್ಕಿದ ಇನ್ನೊಬ್ಬ ಪಾಕ್​ ಆಟಗಾರ ಮಹಮದ್​ ರಿಜ್ವಾನ್​ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಭಾರತದ ಯಾವೊಬ್ಬ ಆಟಗಾರರೂ ಟಾಪ್​ 10 ರಲ್ಲಿ ಕಾಣಿಸಿಕೊಂಡಿಲ್ಲ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಜೋಶ್​ ಹೇಜಲ್​ವುಡ್​ 2 ಸ್ಥಾನ ಮೇಲೇರಿ ನಂ.1 ಸ್ಥಾನ ಪಡೆದಿದ್ದಾರೆ.

ಆಲ್​ರೌಂಡರ್​ಗಳ ಪಟ್ಟಿಯಲ್ಲೂ ಕೂಡ ಭಾರತದ ಆಟಗಾರರಿಲ್ಲ. ಅಫ್ಘಾನಿಸ್ತಾನದ ಮೊಹಮ್ಮದ್​ ನಬಿ, ಬಾಂಗ್ಲಾದೇಶದ ಶಕೀಬ್​ ಅಲ್​ ಹಸನ್​, ಇಂಗ್ಲೆಂಡ್​ನ ಮೊಯೀನ್​ ಅಲಿ ಮೊದಲ ಮೂರು ಸ್ಥಾನ ಸಂಪಾದಿಸಿದ್ದಾರೆ.

ಟೆಸ್ಟ್​ ಪಟ್ಟಿ:ಟೆಸ್ಟ್​ ರ‍್ಯಾಂಕಿಂಗ್‌​ ಪಟ್ಟಿಯಲ್ಲಿ ಭಾರತದ ಅಗ್ರ ಬ್ಯಾಟರ್‌​ಗಳಾದ ನಾಯಕ ರೋಹಿತ್​ ಶರ್ಮಾ 8 ನೇ ಸ್ಥಾನದಲ್ಲಿ ಮುಂದುವರಿದರೆ, ವಿರಾಟ್​ ಕೊಹ್ಲಿ 10ನೇ ಸ್ಥಾನದಲ್ಲಿ ಸಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶತಕಗಳ ಮೇಲೆ ಶತಕ ಬಾರಿಸುತ್ತಿರುವ ಇಂಗ್ಲೆಂಡ್​ನ ಜೋ ರೂಟ್​ ಆಸ್ಟ್ರೇಲಿಯಾದ ಮಾರ್ನಸ್​ ಲಬುಶೇನ್​ರನ್ನು 2 ನೇ ಸ್ಥಾನಕ್ಕೆ ತಳ್ಳಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸ್ವೀವ್ ಸ್ಮಿತ್​ ಮೂರನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ಅಗ್ರ 10ರಲ್ಲಿ ಭಾರತದ ಇಬ್ಬರು ಬೌಲರ್​ಗಳು ಕಾಣಿಸಿಕೊಂಡಿದ್ದಾರೆ. ಒಂದು ಸ್ಥಾನ ಏರಿಕೆ ಕಂಡ ಜಸ್ಪ್ರೀತ್​ ಬೂಮ್ರಾ 3 ನೇ ಕ್ರಮಾಂಕ ಪಡೆದರೆ, ರವಿಚಂದ್ರನ್​ ಅಶ್ವನ್​ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್​ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಭಾರತದ ಆಟಗಾರರು ಪಾರಮ್ಯ ಮೆರೆದಿದ್ದಾರೆ. ಮೊದಲೆರಡು ಸ್ಥಾನಗಳಲ್ಲಿ ಸ್ಟಾರ್​ ಆಟಗಾರ ರವೀಂದ್ರ ಜಡೇಜಾ ಇದ್ದರೆ, ಆರ್.ಅಶ್ವಿನ್​ 2ನೇ ಸ್ಥಾನದಲ್ಲಿದ್ದಾರೆ. ವೆಸ್ಟ್​ ಇಂಡೀಸ್​ನ ಜಾಸನ್​ ಹೋಲ್ಡರ್​ 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಇದನ್ನೂ ಓದಿ:2ನೇ ಟೆಸ್ಟ್: ಬೈರ್‌ಸ್ಟೋವ್ ಅದ್ಭುತ ಶತಕ, ನ್ಯೂಜಿಲ್ಯಾಂಡ್​​​​​ ವಿರುದ್ಧ ಇಂಗ್ಲೆಂಡ್​​ಗೆ ರೋಚಕ ಜಯ

ABOUT THE AUTHOR

...view details