ಬರ್ಮಿಂಗ್‌ಹ್ಯಾಮ್(ಇಂಗ್ಲೆಂಡ್):ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಮುನ್ನ ನ್ಯೂಜಿಲ್ಯಾಂಡ್, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದು ತನ್ನ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಿದೆ. ಆಂಗ್ಲರ ವಿರುದ್ಧ 2 ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಇಂದು ನ್ಯೂಜಿಲೆಂಡ್ ತಂಡ ಅಮೋಘ ಗೆಲುವು ದಾಖಲಿಸಿತು.
ಇಂಗ್ಲೆಂಡ್ ತಂಡವನ್ನು 122 ರನ್ನುಗಳಿಗೆ ಕಟ್ಟಿ ಹಾಕಿದ ನಂತರ, ಪಂದ್ಯ ಗೆಲ್ಲಲು ಬೇಕಿದ್ದ 38 ರನ್ನುಗಳನ್ನು 10.5 ಓವರ್‌ಗಳಲ್ಲಿ ಅತ್ಯಂತ ಸುಲಭವಾಗಿ ಸಾಧಿಸುವಲ್ಲಿ ಕಿವೀಸ್ ಯಶಸ್ವಿಯಾಗಿದೆ. ಈ ಮೂಲಕ 1999 ರ ಬಳಿಕ ಆಂಗ್ಲರ ಮಣ್ಣಿನಲ್ಲಿ ಟೆಸ್ಟ್ ಸರಣಿ ಗೆದ್ದ ಅಪರೂಪದ ಸಾಧನೆಯನ್ನೂ ಟಾಮ್ ಲಾಥಮ್ ಬಳಗ ಮಾಡಿದೆ.
ಟ್ರೆಂಟ್ ಬೌಲ್ಟ್ ಸೇರಿದಂತೆ ಕಿವೀಸ್ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಕಳೆದ ರಾತ್ರಿ ಕೇವಲ 122 ರನ್ನುಗಳನ್ನು ಮಾಡಲಷ್ಟೇ ಶಕ್ತವಾಯಿತು. ಈ ಮೂಲಕ ಅತ್ಯಂತ ಸಣ್ಣ ಮೊತ್ತವನ್ನು ಕಿವೀಸ್‌ಗೆ ಟಾರ್ಗೆಟ್ ಆಗಿ ನೀಡಿತು. ಈ ಗುರಿ ಬೆನ್ನುಟ್ಟುವ ವೇಳೆ ನ್ಯೂಜಿಲೆಂಡ್ ತಂಡದ ಡೇವನ್ ಕಾನ್ವಾಯ್, ವಿಲ್ ಯಂಗ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದ್ರೂ ನಾಯಕ ಟಾಮ್ ಲಾಥಮ್ ವಿಜಯದ ರನ್ ಬಾರಿಸುವುದನ್ನು ತಡೆಯಲು ಇಂಗ್ಲೆಂಡ್ ಯಶಸ್ವಿಯಾಗಲಿಲ್ಲ. ಈ ಮೂಲಕ ಇಲ್ಲಿಯವರೆಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಸರಣಿ ಗೆದ್ದ ಸಾಧನೆ ಕಿವೀಸ್ ಪಾಲಿಗೆ ದಕ್ಕಿತು.
ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದ ನಂತರ ಆರು ಆಟಗಾರರನ್ನು ಬದಲಿಸಿದೆ. ತಂಡದ ನಾಯಕ ಕೇನ್ ವಿಲಿಯಮ್ಸನ್ ಕೂಡ ಆಡುವ ಬಳಗದಿಂದ ಹೊರಗುಳಿಯಬೇಕಾಯಿತು. ಕಿವೀಸ್ ಅದೃಷ್ಟಕ್ಕೆ ತಂಡ ಸೇರಿದ ಅಷ್ಟೂ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದು, ನ್ಯೂಜಿಲೆಂಡ್ ಆಯ್ಕೆದಾರರ ತಲೆನೋವು ಕಡಿಮೆ ಮಾಡಿದೆ. ಅದೂ ಕೂಡಾ ಬಲಿಷ್ಠ ಭಾರತದ ವಿರುದ್ಧ ಇದೇ ಕ್ರೀಡಾಂಗಣದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಸೆಣಸಲಿದ್ದು, ಈ ಗೆಲುವು ಕೂಡಾ ನಿರ್ಣಾಯಕವಾಗಿತ್ತು.