ಕ್ರೈಸ್ಟ್ಚರ್ಚ್:ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲುಂಡು ನಿರಾಸೆ ಅನುಭವಿಸಿದ್ದ ನ್ಯೂಜಿಲ್ಯಾಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ ಮೊದಲ ಇನ್ನಿಂಗ್ಸ್ನಲ್ಲಿ 128.5 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 521 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನಾಯಕ ಟಾಮ್ ಲೇಥಮ್ 373 ಎಸೆತಗಳಲ್ಲಿ 34 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 252 ರನ್ಗಳಿಸಿದರೆ, ಇವರಿಗೆ ಸಾಥ್ ನೀಡಿದ ಡೆವೊನ್ ಕಾನ್ವೆ 166 ಎಸೆತಗಳಲ್ಲಿ 109 ರನ್ಗಳಿಸಿದ್ದರು. ಉಳಿದಂತೆ ವಿಲ್ ಯಂಗ್ 54 ಮತ್ತು ಬ್ಲಂಡಲ್ 57 ರನ್ಗಳಿಸಿದ್ದಾರೆ.
ಶೊರಿಫುಲ್ ಇಸ್ಲಾಮ್ 79ಕ್ಕೆ 2, ಎಬಾದತ್ ಹುಸೇನ್ 143ಕ್ಕೆ 2, ಮೊಮಿನುಲ್ ಹಕ್ 34ಕ್ಕೆ 1 ವಿಕೆಟ್ ಪಡೆದರು.
ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ, ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 126 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ 395 ರನ್ಗಳ ಹಿನ್ನಡೆ ಅನುಭವಿಸಿದೆ.
ಯಾಸಿರ್ ಅಲಿ 55 ಮತ್ತು ನೂರುಲ್ ಹಸನ್ 41 ರನ್ಗಳಿಸಿದ್ದರೆ ಬಿಟ್ಟರೆ ತಂಡದ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಟಲಿಲ್ಲ.
ಟಿಮ್ ಸೌಥಿ 28ಕ್ಕೆ 3, ಟ್ರೆಂಟ್ ಬೌಲ್ಟ್ 43ಕ್ಕೆ 5 ಮತ್ತು ಕೈಲ್ ಜೇಮಿಸನ್ 32ಕ್ಕೆ 2 ವಿಕೆಟ್ ಪಡೆದು ಮಿಂಚಿದರು. ನಾಳೆ ಪಂದ್ಯದ ಮೂರನೇ ದಿನವಾಗಿದ್ದು ಬಾಂಗ್ಲಾಗೆ ಫಾಲೋ ಆನ್ ಹೇರಲಿದೆಯೇ ಅಥವಾ ಕೊನೆಯ ಟೆಸ್ಟ್ ಪಂದ್ಯವನ್ನಾಡುವ ರಾಸ್ ಟೇಲರ್ಗೆ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಡಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: IND vs SA 3rd Test: ಫೈನಲ್ ಟೆಸ್ಟ್ ಆಡಲು ಕೇಪ್ಟೌನ್ಗೆ ಬಂದ ಕೊಹ್ಲಿ ಪಡೆಗೆ ಅದ್ಧೂರಿ ಸ್ವಾಗತ