ಮುಂಬೈ: ಕಳೆದೆರಡು ದಿನಗಳಿಂದ ಭಾರತ ಸೀಮಿತ ಓವರ್ಗಳ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದು ಉಪನಾಯಕ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ಬಿಟ್ಟುಕೊಡಲಿದ್ದಾರೆ ಎಂಬ ಊಹಾಪೋಹಾ ಕೇಳಿ ಬರುತ್ತಿತ್ತು. ಆದರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೊನೆಗೂ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದು, ಪ್ರಸ್ತುತ ಭಾರತ ತಂಡ ಉತ್ತಮ ಪ್ರದರ್ಶನ ತೋರುತ್ತಿದ್ದು, ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವ ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
"ಯಾವುದೇ ಒಂದು ತಂಡ ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದರೆ ನಾಯಕತ್ವದ ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ" ಎಂದು ಶಾ ಸೋಮವಾರ ನಾಯಕತ್ವ ಬದಲಾವಣೆ ವಿಷಯವಾಗಿ ನಡೆಯುತ್ತಿರುವ ಚರ್ಚೆಗೆ ತೆರೆ ಎಳೆದಿದ್ದಾರೆ.
ಕಳೆದ ಎರಡು ದಿನಗಳಿಂದ ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಸೀಮಿತ ಓವರ್ಗಳ ನಾಯಕತ್ವವನ್ನು ಉಪನಾಯಕ ರೋಹಿತ್ ಶರ್ಮಾರಿಗೆ ಬಿಟ್ಟುಕೊಟ್ಟು ಕೇವಲ ಬ್ಯಾಟ್ಸ್ಮನ್ ಆಗಿ ಮಾತ್ರ ಮುಂದುವರಿಯಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.