ನವದೆಹಲಿ: ಭಾರತದ ಯುವ ಸ್ಟಾರ್ ಬ್ಯಾಟರ್ ನಿತೀಶ್ ರಾಣ ತಮ್ಮ ರಾಜ್ಯವನ್ನು ಬಿಟ್ಟು ಪಕ್ಕದ ಉತ್ತರ ಪ್ರದೇಶಕ್ಕಾಗಿ 2023 -24ರ ದೇಶೀಯ ಕ್ರಿಕೆಟ್ ಆಡುವುದಾಗಿ ಘೋಷಿಸಿಕೊಂಡಿದ್ದಾರೆ. ಈ ವರ್ಷದ ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ಅವರ ಅನುಪಸ್ಥಿತಿಯಲ್ಲಿ ನಿತೀಶ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದರು. ಉತ್ತರ ಪ್ರದೇಶದ ತಂಡದಲ್ಲಿ ಕೆಕೆಆರ್ನ ಸಹ ಆಟಗಾರ ಎಡಗೈ ಬ್ಯಾಟರ್ ರಿಂಕು ಸಿಂಗ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಈ ವರ್ಷದಿಂದ ಉತ್ತರ ಪ್ರದೇಶದಲ್ಲಿ ಆರಂಭವಾಗುತ್ತಿರುವ ಯುಪಿಟಿ20 ಲೀಗ್‌ನಲ್ಲಿ ನೋಯ್ಡಾ ಸೂಪರ್ ಕಿಂಗ್ಸ್ ಪರ ರಾಣ ಮೈದಾನಕ್ಕಿಳಿಯಲಿದ್ದಾರೆ. ನಿತೀಶ್ ರಾಣಾ ದೆಹಲಿ ಬಿಡುವ ಬಗ್ಗೆ ಈ ಹಿಂದೆ ಕೆಲ ಸುದ್ದಿಗಳು ಬಂದಿದ್ದವು. ಆದರೆ, ಈಗ ರಾಣಾ ಅವರೇ ಎಕ್ಸ್ ಆ್ಯಪ್ನಲ್ಲಿ ಪತ್ರವನ್ನು ಬಿಡುಗಡೆ ಮಾಡಿ, ದೆಹಲಿ ಬಿಡುತ್ತಿರುವ ಸುದ್ದಿಯ ಜೊತೆಗೆ ಏಕೆ ಎಂಬ ಸ್ಪಷ್ಟನೆ ನೀಡಿದ್ದಾರೆ.
ಪತ್ರದಲ್ಲಿ,"ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ನನಗೆ ಒದಗಿಸಿದ ಅವಕಾಶಗಳು, ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ದೆಹಲಿ ತಂಡದ ನಾಯಕನಾಗಿ ನನಗೆ ಸಿಕ್ಕ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ. ನಾನು ಈಗ ಹೊಸ ಅಧ್ಯಾಯ ಆರಂಭಿಸುವ ಇಚ್ಛೆಯಲ್ಲಿದ್ದೇನೆ. ನಾನು ಡಿಡಿಸಿಎ ಜೊತೆಗಿನ ಸಮಯದಲ್ಲಿ ರೋಹನ್ ಜೇಟ್ಲಿ ಅವರ ಬೆಂಬಲ ಮತ್ತು ಸಹಕಾರಕ್ಕಾಗಿ ನನ್ನ ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಲು ಬಯಸುತ್ತೇನೆ.
ಹೇಗಾದರೂ, ಪುಟವನ್ನು ತಿರುಗಿಸಲು ಮತ್ತು ನನ್ನ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ಸಾಕಷ್ಟು ಆಲೋಚನೆಯೊಂದಿಗೆ ಈ ನಿರ್ಧಾರಕ್ಕೆ ಬಂದಿದ್ದೇನೆ ಮತ್ತು ಮುಂಬರುವ ದೇಶೀಯ ಋತುವಿನಿಂದ ನಾನು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಗೆ ಸೇರುತ್ತೇನೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ನಾನು ಯುಪಿಸಿಎಗಾಗಿ ಆಡಲು ಉತ್ಸುಕನಾಗಿದ್ದೇನೆ ಮತ್ತು ಎಲ್ಲರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.