ಆ್ಯಂಟಿಗುವಾ:ಕೀರನ್ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕ್ರಿಕೆಟ್ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಅವರನ್ನು ಸೀಮಿತ ಓವರ್ಗಳ ತಂಡದ ನಾಯಕನಾಗಿ ನೇಮಕ ಮಾಡಲಾಗಿದೆ.
ಪೂರನ್ ಕಳೆದ ವರ್ಷ ಉಪನಾಯಕನಾಗಿ ನೇಮಕವಾಗಿದ್ದರು. ಇದೀಗ ಪೊಲಾರ್ಡ್ ಸ್ಥಾನವನ್ನು ತುಂಬಲಿದ್ದಾರೆ. ಮುಂಬರುವ ಟಿ-20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ನಲ್ಲೂ ಪೂರನ್ ವಿಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿ ಆರಂಭಿಕ ಬ್ಯಾಟರ್ ಶಾಯ್ ಹೋಪ್ ಏಕದಿನ ತಂಡದ ಉಪನಾಯಕನಾಗಿ ಶಿಫಾರಸು ಮಾಡಲಾಗಿದೆ ಎಂದು ಬೋರ್ಡ್ ಪ್ರಕಟಣೆಯಲ್ಲಿ ತಿಳಿಸಿದೆ.
ಪೂರನ್ ಈಗಾಗಲೇ ಪೊಲಾರ್ಡ್ ಗೈರಿನಲ್ಲಿ ವಿಂಡೀಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅವರು 2021ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಜಿ ಇನ್ಸುರೆನ್ಸ್ ಟಿ20 ಸರಣಿಯಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದರು.
ಎಡಗೈ ಬ್ಯಾಟರ್ 37 ಏಕದಿನ ಮತ್ತು 57 ಟಿ-20 ಪಂದ್ಯಗಳಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 8 ಅರ್ಧಶತಕ ಮತ್ತು ಒಂದು ಶತಕ ಸಹಿತ 1,121ರನ್ ಮತ್ತು 8 ಅರ್ಧಶತಕಗಳ ಸಹಿತ 1,194 ಟಿ-20 ರನ್ಗಳಿಸಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ನಾಯಕನಾಗಿರುವುದಕ್ಕೆ ನನಗೆ ತುಂಬಾ ಗೌರವವೆನ್ನಿಸುತ್ತಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ಗೆ ಅದ್ಭುತ ಪರಂಪರೆ ಸೃಷ್ಟಿಸಿರುವ ದಿಗ್ಗಜರ ಹೆಜ್ಜೆಗಳನ್ನು ನಾನು ಅನುಸರಿಸಲಿದ್ದೇನೆ. ಇದು ನಿಜಕ್ಕೂ ಪ್ರತಿಷ್ಠಿತ ಜವಾಬ್ದಾರಿಯಾಗಿದ್ದು, ವೆಸ್ಟ್ ಇಂಡಿಯನ್ ಸಮಾಜದಲ್ಲಿ ಪ್ರಮುಖ ಸ್ಥಾನವಾಗಿದೆ. ಏಕೆಂದರೆ ಕ್ರಿಕೆಟ್ ಎಲ್ಲಾ ವೆಸ್ಟ್ ಇಂಡಿಯನ್ನರನ್ನು ಒಟ್ಟಿಗೆ ಸೇರಿಸುವ ಶಕ್ತಿಯಾಗಿದೆ. ಈ ತಂಡಕ್ಕೆ ನಾಯಕನಾಗಿ ಆಯ್ಕೆ ಆಗಿರುವುದು ಇದುವರೆಗಿನ ನನ್ನ ವೃತ್ತಿಜೀವನದ ಪ್ರಮುಖ ಅಂಶವಾಗಿದೆ. ನಮ್ಮ ಅಭಿಮಾನಿಗಳು ಮತ್ತು ನಿಷ್ಠಾವಂತ ಬೆಂಬಲಿಗರಿಗಾಗಿ ಮೈದಾನದಲ್ಲಿ ಉತ್ತಮ ಸಾಧನೆಗಳನ್ನು ಮಾಡಲು, ತಂಡವನ್ನು ಮುನ್ನಡೆಸಲು ನಾನು ಬಯಸುತ್ತೇನೆ ಎಂದು ಪೂರನ್ ತಿಳಿಸಿದ್ದಾರೆ.
ಪೂರನ್ ನೆದರ್ಲೆಂಡ್ಸ್ ವಿರುದ್ಧ ನಾಯಕನಾಗಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಲಿದ್ದಾರೆ. ಐಸಿಸಿ ವಿಶ್ವಕಪ್ ಸೂಪರ್ ಲೀಗ್ನ 3 ಏಕದಿನ ಪಂದ್ಯಗಳು ಮೇ 31ರಿಂದ ಆರಂಭವಾಗಲಿದೆ.
ಇದನ್ನೂ ಓದಿ:ದ್ರಾವಿಡ್ರಿಂದ ಕಲಿತ ಪ್ರತಿ ತಂತ್ರ, ಸಲಹೆಗಳನ್ನ ಪುಸ್ತಕದಲ್ಲಿ ಬರೆದಿಟ್ಟಿರುವೆ : ಸಂಜು ಸಾಮ್ಸನ್