ಕ್ರೈಸ್ಟ್ಚರ್ಚ್(ನ್ಯೂಜಿಲ್ಯಾಂಡ್):ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವೂ ಮಳೆಯಿಂದಾಗಿ ರದ್ದಾಗುವ ಮೂಲಕ ಭಾರತ ವಿರುದ್ಧ ಆತಿಥೇಯ ನ್ಯೂಜಿಲ್ಯಾಂಡ್ 3 ಏಕದಿನ ಪಂದ್ಯಗಳ ಸರಣಿಯನ್ನು 1-0 ಯಿಂದ ಗೆಲುವು ಸಾಧಿಸಿತು. 10 ತಿಂಗಳಲ್ಲಿ ಭಾರತ ಇದೇ ಮೊದಲ ಬಾರಿಗೆ ಸರಣಿ ಸೋಲು ಅನುಭವಿಸಿತು. ಮೊದಲ ಏಕದಿನವನ್ನು ಕಿವೀಸ್ 7 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು. 2ನೇ ಪಂದ್ಯ ಮಳೆಗೆ ರದ್ದಾಗಿತ್ತು.
ಭಾರತ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟ್ ಸರಣಿಯಲ್ಲಿ ಆಟಗಾರರಿಗಿಂತಲೂ ಮಳೆರಾಯನೇ ಆರ್ಭಟಿಸಿದ್ದೇ ಹೆಚ್ಚು. ಮೊದಲು ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಮೊದಲ ಒಂದೂ ಎಸೆತ ಕಾಣದೇ ಮಳೆಗೆ ರದ್ದಾಯಿತು. ಬಳಿಕ ಎರಡನೇ ಪಂದ್ಯದಲ್ಲಿ ಭಾರತ ಕೆಚ್ಚೆದೆಯ ಆಟವಾಡಿ 65 ರನ್ಗಳಿಂದ ಗೆದ್ದಿತು. ಮೂರನೇ ಟಿ20ಗೂ ವರುಣ ಅಡ್ಡಿಯಾಗಿ ಪಂದ್ಯ ಟೈ ಆಯಿತು. ಇದರಿಂದ ಭಾರತ ಸರಣಿಯನ್ನು 1-0 ಯಿಂದ ಕೈ ವಶ ಮಾಡಿಕೊಂಡಿತು.
ಬಳಿಕ ಆರಂಭವಾದ ಮೂರು ಪಂದ್ಯಗಳ ಏಕದಿನ ಸರಣಿಗೂ ಮಳೆಕಾಟ ತಪ್ಪಲಿಲ್ಲ. ಮೊದಲ ಏಕದಿನಕ್ಕೆ ಬಿಡುವು ಪಡೆದಿದ್ದ ವರುಣದೇವನ ಕೃಪೆಯಿಂದ ಆತಿಥೇಯ ನ್ಯೂಜಿಲ್ಯಾಂಡ್ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತ್ತು. 2ನೇ ಏಕದಿನಕ್ಕೆ ಮತ್ತೆ ಅಡ್ಡಿಯಾಗಿ ಪಂದ್ಯವನ್ನು ಆಪೋಷನ ಪಡೆದಿದ್ದ. ಇದರಿಂದ ಸರಣಿ ನೀರಸವಾಯಿತು. ಇಂದು ನಡೆದ ಮೂರನೇ ಮತ್ತು ಅಂತಿಮ ಪಂದ್ಯಕ್ಕೆ ಬಿಡುವು ಕೊಟ್ಟಂತೆ ಮಾಡಿ ಕೊನೆಯಲ್ಲಿ ವರ್ಷಧಾರೆಯಾದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು.
ಆತಿಥೇಯರ ಗೆಲುವು ಕಸಿದ ವರುಣ:ಮೂರನೇ ಪಂದ್ಯದಲ್ಲಿ ಭಾರತವನ್ನು 219 ರನ್ಗಳ ಸಾಧರಣ ಮೊತ್ತಕ್ಕೆ ಕಟ್ಟಿಹಾಕಿ ಇನ್ನೇನು 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಳ್ಳುವ ಉತ್ಸಾಹದಲ್ಲಿ ನ್ಯೂಜಿಲ್ಯಾಂಡ್ಗೆ ಮಳೆ ಆಘಾತ ನೀಡಿತು. 18 ಓವರ್ಗಳಲ್ಲಿ 1 ವಿಕೆಟ್ಗೆ 104 ರನ್ ಗಳಿಸಿದ್ದಾಗ ಮಳೆ ಸುರಿಯಲಾರಂಭಿಸಿತು.