ನವದೆಹಲಿ: 2007 ಸೆಪ್ಟೆಂಬರ್ 24 ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷ ದಿನವಾಗಿದ್ದು, ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡ ಅವಿಸ್ಮರಣೀಯ ದಿನಕ್ಕೆ ಇಂದು 13ನೇ ವರ್ಷದ ಸಂಭ್ರಮ.
ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಯುವ ಪಡೆ ಚುಟುಕು ಕ್ರಿಕೆಟ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 5 ರನ್‌ಗಳ ರೋಚಕ ಜಯ ದಾಖಲಿಸಿ ಟ್ರೋಫಿ ಎತ್ತಿ ಹಿಡಿದಿತ್ತು. ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯ ಕೊನೆಯ ಎಸೆತದವರೆಗೂ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಲ್ಲಿರಿಸಿತ್ತು.
ಫೈನಲ್‌ನಲ್ಲಿ ಗೆಲ್ಲಲು 158 ರನ್‌ಗಳ ಗುರಿ ಪಡೆದಿದ್ದ ಪಾಕಿಸ್ತಾನ ತಂಡ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಒಂದು ಹಂತದಲ್ಲಿ ಸತತ ವಿಕೆಟ್‌ಗಳನ್ನು ಕೈಚೆಲ್ಲಿದ ಪಾಕ್ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಮಿಸ್ಬಾ ಉಲ್‌ಹಕ್ ಏಕಾಂಗಿ ಹೋರಾಟ ನಡೆಸಿ ಅಂತಿಮ ಓವರ್ವರೆಗೂ ಗೆಲುವಿಗೆ ಹೋರಾಡಿದ್ರು. ಅಂತಿಮ ಓವರ್ನಲ್ಲಿ ಅನಗತ್ಯ ಹೊಡೆತಕ್ಕೆ ಮುಂದಾದ ಮಿಸ್ಬಾ, ಕ್ಯಾಚ್ ನೀಡಿದ ಪರಿಣಾಮ ಪಾಕ್ 5 ರನ್‌ಗಳಿಂದ ಸೋಲು ಕಂಡಿತು.
ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಗೌತಮ್ ಗಂಭೀರ್ 75 ರನ್ ಮತ್ತು ಇರ್ಫಾನ್ ಪಠಾಣ್ 3 ವಿಕೆಟ್ ಪಡೆದು ಮಿಂಚಿದ್ರು. ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು. ಅಂದು ಭಾರತಕ್ಕೆ ಟಿ-20 ವಿಶ್ವಕಪ್ ತಂದುಕೊಟ್ಟ ಅನೇಕ ಆಟಗಾರರು ಇದೀಗ ನಿವೃತ್ತಿಯಾಗಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಒಂದು ಅವಿಸ್ಮರಣೀಯ ದಿನವನ್ನು ಉಳಿಸಿಕೊಟ್ಟಿದ್ದಾರೆ.