ಪುಣೆ (ಮಹಾರಾಷ್ಟ್ರ): ನಡೆಯುತ್ತಿರುವ ವಿಶ್ವಕಪ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತ ಬಂದಿರುವ ದಕ್ಷಿಣ ಆಫ್ರಿಕಾ ಇಂದು ನ್ಯೂಜಿಲೆಂಡ್ ಎದುರು ದೊಡ್ಡ ಮೊತ್ತವನ್ನು ಕಲೆಹಾಕಿದೆ. ಕ್ವಿಂಟನ್ ಡಿ ಕಾಕ್ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಆಡಿದ ಶತಕದ ಇನ್ನಿಂಗ್ಸ್ ಬಲದಿಂದ ಹರಿಣಗಳು ನಿಗದಿತ ಓವರ್ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದ್ದಾರೆ. ಸೆಮೀಸ್ ಸ್ಥಾನವನ್ನು ಉಳಿಸಿಕೊಳ್ಳಲು ಉಭಯ ತಂಡಗಳಿಗೆ ಈ ಪಂದ್ಯದ ಗೆಲುವು ಮುಖ್ಯವಾಗಿದೆ. ದಕ್ಷಿಣ ಆಫ್ರಿಕಾ ಪಂದ್ಯ ಗೆದ್ದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದೆ.
ಕಳೆದ 7 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿದಾಗ 300ರ ಗಡಿ ದಾಟಿ ರನ್ ಕಲೆಹಾಕಿದೆ. ಹರಿಣಗಳು ರನ್ನ ಒತ್ತಡ ಇಲ್ಲದಿದ್ದಾಗ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಪಂದ್ಯದಲ್ಲೂ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ತಂಡ ಉತ್ತಮ ಆರಂಭವನ್ನು ಪಡೆಯದಿದ್ದರೂ, ನಂತರ ದೊಡ್ಡ ಮೊತ್ತವನ್ನೇ ಪೇರಿಸಿದೆ. ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ನಡೆಯುತ್ತಿರುವ ವಿಶ್ವಕಪ್ನಲ್ಲಿ ಸತತ ವೈಫಲ್ಯತೆ ಎದುರಿಸುತ್ತಿದ್ದಾರೆ. ಈ ಪಂದ್ಯದಲ್ಲೂ 24ರನ್ಗೆ ಅವರ ಇನ್ನಿಂಗ್ಸ್ ಮುಕ್ತಾಯವಾಗಿತ್ತು.
ಡಿ ಕಾಕ್, ಡುಸ್ಸೆನ್ ದ್ವಿಶತಕದ ಜೊತೆಯಾಟ: ಎರಡನೇ ವಿಕೆಟ್ಗೆ ಒಂದಾದ ಕ್ವಿಂಟನ್ ಡಿ ಕಾಕ್ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಅವರು ಕಿವೀಸ್ ತಂಡ ಪ್ರಬಲ ಬೌಲಿಂಗ್ ದಾಳಿಯನ್ನು ತಾಳ್ಮೆಯಿಂದ ಎದುರಿಸಿದರು. ಮೊದಲ ಪವರ್ ಪ್ಲೇ ಅಂತ್ಯಕ್ಕೆ ತಂಡ 1 ವಿಕೆಟ್ ಕಳೆದುಕೊಂಡು 47 ರನ್ ಮಾತ್ರ ಗಳಿಸಿತ್ತು. 20 ಓವರ್ ವೇಳೆಗೆ ಈ ಇಬ್ಬರೂ ಬ್ಯಾಟರ್ಗಳು ಸೆಟ್ ಆಗಿ ನಿಂತಿದ್ದರೂ ರನ್ ಕದಿಯುವಲ್ಲಿ ವಿಫಲರಾದರು. ಇಬ್ಬರು ಬ್ಯಾಟರ್ಗಳು 100ರ ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸುತ್ತಿದ್ದರು. ಉಭಯ ಬ್ಯಾಟರ್ಗಳು ಶತಕ ಮಾಡಿಕೊಂಡು ದ್ವಿಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು.