ಚೆನ್ನೈ (ತಮಿಳುನಾಡು): ಇಂಗ್ಲೆಂಡ್ ವಿರುದ್ಧ ಪ್ರಬಲ ಬೌಲಿಂಗ್ ದಾಳಿಯಿಂದ ಗೆಲುವು ದಾಖಲಿಸಿದ್ದ ಅಫ್ಘಾನ್ ಚೆನ್ನೈನ ಚೆಪಾಕ್ ಪಿಚ್ನಲ್ಲಿ ಕಿವೀಸ್ಗೆ ಆರಂಭಿಕ ಆಘಾತ ನೀಡಿತು. ಆದರೆ ವಿಲ್ ಯಂಗ್, ಟಾಮ್ ಲ್ಯಾಥಮ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಅರ್ಧಶತಕ ನೆರವಿನಿಂದ ನ್ಯೂಜಿಲ್ಯಾಂಡ್ ನಿಗದಿತ ಓವರ್ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿದೆ. ಆಫ್ಘನ್ ತನ್ನ ಜಯದ ಲಯವನ್ನು ಮುಂದುವರೆಸಲು 289 ರನ್ಗಳ ಕೋಟೆಯನ್ನು ಭೇದಿಸಬೇಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಕಿವೀಸ್ಗೆ ಉತ್ತಮ ಆರಂಭ ಸಿಗಲಿಲ್ಲ. ಬೌಲಿಂಗ್ ಶಕ್ತಿಯಿಂದ ಇಂಗ್ಲೆಂಡ್ ಮಣಿಸಿದ್ದ ಅಫ್ಘಾನಿಸ್ತಾನದ ಬೌಲರ್ಗಳ ಅದೇ ಆತ್ಮವಿಶ್ವಾಸದಲ್ಲಿ ಕಾಣಿಸಿಕೊಂಡರು. ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಶತಕ ಗಳಿಸಿದ್ದ ಡೆವೊನ್ ಕಾನ್ವೇ (20) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್ಗೆ ರಚಿನ್ ರವೀಂದ್ರ ಮತ್ತು ಇನ್ನೋರ್ವ ಆರಂಭಿಕ ಆಟಗಾರ ವಿಲ್ ಯಂಗ್ 79 ರನ್ಗಳ ಜೊತೆಯಾಟವಾಡಿದರು. ಆದರೆ, ಕಿವೀಸ್ನ ಮೂರು ವಿಕೆಟ್ ಒಮ್ಮೆಲೇ ಪತನವಾಯಿತು.
ಏಕಾಏಕಿ ಕುಸಿದ ಮಧ್ಯಮ ಕ್ರಮಾಂಕ: ತಂಡದ ಮೊತ್ತ 109 ಆಗಿದ್ದಾಗ ರಚಿನ್ ರವೀಂದ್ರ (32) ವಿಕೆಟ್ ಕಳೆದುಕೊಂಡರೆ, 110 ರನ್ ಆದಾಗ ಅರ್ಧಶತಕ ಗಳಸಿದ್ದ ವಿಲ್ ಯಂಗ್ (54) ಸಹ ಔಟ್ ಆದರು. ಅವರ ಬೆನ್ನಲ್ಲೇ ಡೇರಿಲ್ ಮಿಚೆಲ್ (1) ಸಹ ಪೆವಿಲಿಯನ್ ಹಾದಿ ಹಿಡಿದರು. ಮೂರು ವಿಕೆಟ್ಗಳು ಒಟ್ಟಿಗೆ ಉರುಳಿದ್ದರಿಂದ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಇಂತಹ ಸಂದರ್ಭದಲ್ಲಿ ಕಮ್ಬ್ಯಾಕ್ ಮಾಡುವಲ್ಲಿ ಎಡವಿತ್ತು. ಆದರೆ, ಕಿವೀಸ್ನ ಕೆಳ ಕ್ರಮಾಂಕದ ಬ್ಯಾಟರ್ಗಳು ಆಸರೆ ಆದರು. ಈ ಮೂಲಕ ಗೌರವಯುತ ಮೊತ್ತ ಕಲೆ ಹಾಕುವಲ್ಲಿ ಕಿವೀಸ್ ಪಡೆ ಯಶಸ್ವಿಯಿತು.