ಮುಂಬೈ:ವಿಶ್ವಕಪ್ ಎದುರಿಸುವ ಮೊದಲು ಸಾಧ್ಯವಾದಷ್ಟು ಏಕದಿನ ಪಂದ್ಯಗಳನ್ನು ಆಡುವುದು ಉತ್ತಮ. ಏಷ್ಯಾಕಪ್ ನಮ್ಮ ಮುಂದಿದೆ. ಇದು ಭಾರತ ಹಾಗೂ ಏಷ್ಯಾ ರಾಷ್ಟ್ರಗಳ ಇತರ ತಂಡಗಳಿಗೆ ಸಹಕಾರಿಯಾಗಲಿದೆ. ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತಕ್ಕೆ ಈ ಪಂದ್ಯಗಳು ಇನ್ನಷ್ಟು ಬೆಂಬಲ ನೀಡಲಿವೆ. ಏಕೆಂದರೆ ಪಂದ್ಯ ನಡೆಯುತ್ತಿರುವ ಸ್ಥಳ ಮತ್ತು ಎದುರಾಳಿ ತಂಡಗಳೇ ಇದಕ್ಕೆ ಕಾರಣವಾಗಿರುವ ಅಂಶಗಳು ಎಂದು ನ್ಯೂಜಿಲೆಂಡ್ ವೇಗದ ಬೌಲರ್ ಟಿಮ್ ಸೌಥಿ ಹೇಳಿದ್ದಾರೆ.
ಇದೇ ತಿಂಗಳು 30ರಿಂದ ಆರಂಭವಾಗಲಿರುವ ಏಷ್ಯಾಕಪ್ಗೆ 18 ಸದಸ್ಯರನ್ನು ಒಳಗೊಂಡ ಭಾರತ ತಂಡವನ್ನು ನಿನ್ನೆ (ಸೋಮವಾರ) ಬಿಸಿಸಿಐ ಪ್ರಕಟಿಸಿದೆ. ಉದಯೋನ್ಮುಖ ಕ್ರಿಕೆಟಿಗ ತಿಲಕ್ ವರ್ಮಾಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ. ಸಂಜು ಸ್ಯಾಮ್ಸನ್ ಅವರನ್ನು ಸ್ಟ್ಯಾಂಡ್-ಬೈ ಆಟಗಾರನನ್ನಾಗಿ ಆಯ್ಕೆ ಮಾಡಲಾಗಿದೆ. ಉಳಿದಂತೆ, ಗಾಯದಿಂದ ಚೇತರಿಸಿಕೊಂಡ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಮರಳಿದ್ದಾರೆ.
"ಭಾರತಕ್ಕೆ ಎಡಗೈ ಬೌಲಿಂಗ್ ಎದುರಿಸುವ ಸಮಸ್ಯೆ ಇದೆ ಎಂದು ನಾನು ಭಾವಿಸುವುದಿಲ್ಲ. ಭಾರತ ತಂಡದಲ್ಲಿರುವ ವಿಶ್ವ ದರ್ಜೆಯ ಆಟಗಾರರು ಯಾವುದೇ ಬೌಲರ್ಗಾದರೂ ತಮ್ಮದೇ ರೀತಿಯ ಯೋಜನೆ ಸಿದ್ಧಪಡಿಸಿರುತ್ತಾರೆ" ಎಂದು ತಿಳಿಸಿದರು.