ಕಾನ್ಪುರ: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿದೆ. ಪಂದ್ಯ ಮುಗಿಯಲು ಇನ್ನೂ 10-13 ನಿಮಿಷಗಳಿದ್ದರೂ ಮಂದ ಬೆಳಕಿನ ಕಾರಣ ಅಂಪೈರ್ಗಳು ಪಂದ್ಯಗಳನ್ನು ಸ್ಥಗಿತಗೊಳಿಸಿದ್ದರಿಂದ ಮ್ಯಾಚ್ ರೋಚಕ ಡ್ರಾನಲ್ಲಿ ಅಂತ್ಯವಾಯಿತು.
ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನವಾದ ಸೋಮವಾರ ನ್ಯೂಜಿಲ್ಯಾಂಡ್ 98 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ಗಳಿಸಿತು. ಭಾರತೀಯ ಮೂಲದ ರಚಿನ್ ರವೀಂದ್ರ 97 ಎಸೆತಗಳನ್ನೆದುರಿಸಿ ಭಾರತದ ಗೆಲುವಿಗೆ ತಣ್ಣೀರೆರಚಿದರು.
ಭಾರತ ತಂಡ 4ನೇ ದಿನ 234 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡು ಕಿವೀಸ್ಗೆ 280 ರನ್ಗಳ ಗುರಿ ನೀಡಿತ್ತು. 4ನೇ ದಿನವೇ ವಿಲ್ ಯಂಗ್(2) ವಿಕೆಟ್ ಪಡೆದು ಮುನ್ನಡೆ ಪಡೆದುಕೊಂಡಿತ್ತು. ಮೊದಲೆರಡು ಸೆಷನ್ಗಳಲ್ಲಿ ಅದ್ಭುತವಾಗಿ ಆಡಿದ ನ್ಯೂಜಿಲ್ಯಾಂಡ್ ಕೇವಲ 3 ವಿಕೆಟ್ ಕಳೆದುಕೊಂಡಿತ್ತು.
ಟಾಮ್ ಲೇಥಮ್(52) ಮತ್ತು ಸಮರ್ವಿಲ್(36) 2ನೇ ವಿಕೆಟ್ಗೆ 36 ಓವರ್ಗಳನ್ನಾಡಿ 76 ರನ್ ಸೇರಿಸಿ ಭಾರತೀಯರನ್ನು ಕಾಡಿದರು.
ಆದರೆ ಭೋಜನ ವಿರಾಮದ ಬಳಿಕ ಭಾರತೀಯ ಬೌಲರ್ಗಳು ಮೇಲುಗೈ ಸಾಧಿಸಿದರು. ಲೇಥಮ್ ವಿಕೆಟ್ ಬೀಳುತ್ತಿದ್ದಂತೆ ಕಿವೀಸ್ ನಿರಂತರ ವಿಕೆಟ್ ಕಳೆದುಕೊಂಡಿತು. ರಾಸ್ ಟೇಲರ್ (2),ಹೆನ್ರಿ ನಿಕೋಲ್ಸ್(1), ಕೇನ್ ವಿಲಿಯಮ್ಸನ್(24), ಟಾಮ್ ಬ್ಲಂಡೆಲ್(2), ಕೈಲ್ ಜೇಮಿಸನ್(5) ಮತ್ತು ಟಿಮ್ ಸೌಥಿ(4) ಭಾರತದ ಸ್ಪಿನ್ ದಾಳಿಗೆ ನಿಲ್ಲಲಾಗದೇ ತತ್ತರಿಸಿತು.
ಆದರೆ ಕೊನೆಯ ವಿಕೆಟ್ಗೆ ರಚಿನ್ ರವೀಂದ್ರ ಮತ್ತು ಅಜಾಜ್ ಪಟೇಲ್ 52 ಎಸೆತಗಳನ್ನೆದುರಿಸಿ ಭಾರತದ ಗೆಲುವಿಗೆ ಮುಳ್ಳಾದರು. ರವೀಂದ್ರ 91 ಎಸೆತಗಳಲ್ಲಿ ಅಜೇಯ 18 ರನ್ಗಳಿಸಿದರೆ ಪಟೇಲ್ 23 ಎಸೆತಗಳಲ್ಲಿ 2 ರನ್ಗಳಿಸಿದರು.