ಕ್ರೈಸ್ಟ್‌ಚರ್ಚ್: ನ್ಯೂಜಿಲೆಂಡ್ ವಿರುದ್ಧ ಮೊದಲನೇ ಏಕದಿನ ಪಂದ್ಯ ಸೋತಿರುವ ಭಾರತ ಇಂದು ಇಲ್ಲಿನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ಮೂರನೇ ಅಥವಾ ಕೊನೆಯ ಏಕದಿನ ಪಂದ್ಯವಾಡುತ್ತಿದೆ. ಶಿಖರ್ ಧವನ್ ಬಳಗದ ವಿರುದ್ಧ ಟಾಸ್ ಗೆದ್ದಿರುವ ಕಿವೀಸ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಭಾರತಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿದ್ದಾರೆ.
ಶಿಖರ್ ಧವನ್ ಜೊತೆಗೆ ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವರು. ಸಂಜು ಸ್ಯಾಮ್ಸನ್ ಅವರಿಗೆ ಮತ್ತೆ ಅವಕಾಶ ಕೈ ತಪ್ಪಿದ್ದು, ದೀಪಕ್ ಹೂಡಾ ಸ್ಥಾನ ಪಡೆದಿದ್ದಾರೆ. ಆಲ್ ರೌಂಡರ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್‌ಗೆ ಸ್ಥಾನ ಸಿಕ್ಕಿದೆ. ಶಾರ್ದೂಲ್ ಠಾಕೂರ್ ಹೊರಬಿದ್ದಿದ್ದಾರೆ. ಬೌಲಿಂಗ್ ಲೈನಪ್‌ನಲ್ಲಿ ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್, ದೀಪಕ್ ಚಹಾರ್ ಮತ್ತು ಚಹಾಲ್ ಇದ್ದಾರೆ. ನ್ಯೂಜಿಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು ಮಿಲ್ನೆ ಸ್ಥಾನಕ್ಕೆ ಬ್ರೇಸ್‌ವೆಲ್ ಬಂದಿದ್ದಾರೆ.
ಈ ಮೈದಾನದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 280 ರನ್ ಆಗಿದೆ. ಪಿಚ್ ಸಾಕಷ್ಟು ಹಸಿರಿನಿಂದ ಕೂಡಿದೆ ಎಂಬುದು ಹಿರಿಯ ಆಟಗಾರರ ಅಭಿಪ್ರಾಯವಾಗಿದೆ.