ವೆಲ್ಲಿಂಗ್ಟನ್:ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ಅವರು ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಶನಿವಾರದಿಂದ ಪ್ರಾರಂಭವಾಗುವ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯು ಅವರಿಗೆ ವೈಟ್ ಜೆರ್ಸಿಯಲ್ಲಿ ಕೊನೆಯ ಪಂದ್ಯವಾಗಲಿದೆ.
ಟ್ವೀಟ್ ಮೂಲಕ ಟೇಲರ್ ಈ ಮಹತ್ವದ ಘೋಷಣೆ ಮಾಡಿದ್ದಾರೆ. 'ಇದೊಂದು ಅದ್ಭುತವಾದ ಪ್ರಯಾಣವಾಗಿತ್ತು. ನನಗೆ ಸಾಧ್ಯವಿರುವವರೆಗೆ ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ' ಎಂದು ಹೇಳಿಕೊಂಡಿದ್ದಾರೆ.
37 ವರ್ಷದ ಟೇಲರ್ 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ನ್ಯೂಜಿಲೆಂಡ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಮುಖ್ಯ ಆಧಾರವಾಗಿದ್ದರು. ಹಲವು ದಾಖಲೆ ಮತ್ತು ಸಾಧನೆಗೆ ಪಾತ್ರರಾಗಿರುವ ರಾಸ್, ವಿಶೇಷವಾಗಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ(445) ಆಡಿರುವುದಲ್ಲದೆ, ಅತ್ಯಧಿಕ ರನ್(18,074) ಪೇರಿಸಿದ್ದಾರೆ. ಹೀಗೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಕಿವೀಸ್ ಆಟಗಾರನಾಗಿ ರಾಸ್ ಟೇಲರ್ ನಿವೃತ್ತಿಯನ್ನು ಪಡೆದುಕೊಳ್ಳಲಿದ್ದಾರೆ.