ವೆಲ್ಲಿಂಗ್ಟನ್ (ನ್ಯೂಜಿಲೆಂಡ್):ತವರು ನೆಲದಲ್ಲಿ ಮೊದಲ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಕಿವೀಸ್ ಎರಡನೇ ಪಂದ್ಯವನ್ನು ರೋಚಕವಾಗಿ ಗೆದ್ದಿದೆ. ಎರಡನೇ ಪಂದ್ಯದಲ್ಲೂ ಸೋಲಿನ ಸನಿಹದಲ್ಲಿದ್ದ ನ್ಯೂಜಿಲೆಂಡ್ಗೆ ನೀಲ್ ವೆಗ್ನರ್ ಬೌಲಿಂಗ್ ಆಸರೆಯಾಯಿತು. ನಾಯಕ ಸೌಥಿ ವೆಗ್ನರ್ಗೆ ಸಾಥ್ ನೀಡಿದರು. ವೇಗಿ ಜೋಡಿ 7 ವಿಕೆಟ್ ಪಡೆದು ಆಂಗ್ಲರನ್ನು ಗೆಲುವಿನ ಒಂದು ರನ್ಗೂ ಮುಂಚೆ ಕಟ್ಟಿಹಾಕಿ ವಿಜಯದ ನಗೆ ಬೀರಿದರು. ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ತವರಿನಲ್ಲಿ ಕ್ಲೀನ್ ಸ್ವೀಪ್ ಆಗುವುದನ್ನು ತಪ್ಪಿಸಿಕೊಂಡ ತಂಡ 1-1 ರಲ್ಲಿ ಸಿರೀಸನ್ನು ಸಮಬಲ ಮಾಡಿಕೊಂಡಿತು.
ಐತಿಹಾಸಿಕ ಗೆಲುವು:ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನ 146 ವರ್ಷಗಳ ಇತಿಹಾಸದಲ್ಲಿ 2494 ಪಂದ್ಯಗಳು ನಡೆದಿದ್ದು, ಅದರಲ್ಲಿ ಫಾಲೋ ಆನ್ ಹೇರಿದ ಮೇಲೆಯೂ ಗೆದ್ದ ಮೂರನೇ ಟೀಂ ನ್ಯೂಜಿಲೆಂಡ್ ಆಗಿದ್ದು, ಈ ರೀತಿ ಗೆಲುವು ದಾಖಲಾದ ನಾಲ್ಕನೇ ಪಂದ್ಯವಾಗಿದೆ. ಇದಕ್ಕೂ ಮೊದಲು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈ ರೀತಿಯ ಗೆಲುವು ಸಾಧಿಸಿದ್ದವು. ಟೆಸ್ಟ್ನಲ್ಲಿ ಒಂದು ರನ್ ಅಂತರದಲ್ಲಿ ಗೆಲುವು ಸಾಧಿಸಿದ ಎರಡನೇ ಪಂದ್ಯ ಇದಾಗಿದೆ.
ನ್ಯೂಜಿಲೆಂಡ್ ನೆಲದಲ್ಲಿ 2017ರ ನಂತರ ಇಂಗ್ಲೆಂಡ್ ಮತ್ತೆ ಸರಣಿ ಗೆಲ್ಲುವ ಅವಕಾಶವನ್ನು ಹೊಂದಿತ್ತು ಆದರೆ, ಒಂದು ರನ್‌ನ ಸೋಲು ಆ ಕನಸನ್ನು ಭಗ್ನಗೊಳಿಸಿತು. ಇಂಗ್ಲೆಂಡ್ ಸೋಲನುಭವಿಸಿದ್ದರಿಂದ ಸರಣಿ 1-1 ರಿಂದ ಸಮಬಲವಾಯಿತು. 19 ವರ್ಷಗಳ ಹಿಂದೆ ನ್ಯೂಜಿಲೆಂಡ್ ನೆಲದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಸಾಧನೆಯನ್ನು ಮತ್ತೆ ಮಾಡುವ ಬಯಕೆಯೂ ಆಂಗ್ಲರಿಗೆ ಈಡೇರಲಿಲ್ಲ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಳ್ಳುವ ಮೂಲಕ ಕಿವೀಸ್ ತಪ್ಪು ನಿರ್ಧಾರ ತೆಗೆದುಕೊಂಡಿತ್ತು. ಆತಿಥೆಯರನ್ನು ಮನಸೋ ಇಚ್ಛೆ ದಂಡಿಸಿದ ಆಂಗ್ಲರು 435 ರನ್ ಮೊದಲ ಇನ್ನಿಂಗ್ಸ್ಗೆ ಕಲೆಹಾಕಿದ್ದರು. ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಸತತ ಕುಸಿತ ಕಂಡು 209 ಆಲ್ ಔಟ್ ಆಯಿತು. 226 ರನ್ ಹಿನ್ನಡೆಯಿಂದ ಎರಡನೇ ಇನ್ನಿಂಗ್ಸ್ನಲ್ಲಿ ಫಾಲೋ ಆನ್ ಪಡೆದ ನ್ಯೂಜಿಲೆಂಡ್ ಭರ್ಜರಿ ಬ್ಯಾಟ್ ಬೀಸಿ 483 ರನ್ ಗಳಿಸಿತು. ಇಂಗ್ಲೆಂಡ್ಗೆ 258 ರನ್ಗಳ ಗುರಿ ನೀಡಿತ್ತು. 256 ರನ್ ಗಳಿಸುವಷ್ಟರಲ್ಲಿ ಆಂಗ್ಲರ ಎಲ್ಲಾ ವಿಕೆಟ್ ಕಬಳಿಸುವಲ್ಲಿ ಬ್ಲ್ಯಾಕ್ಕ್ಯಾಪ್ಸ್ ಯಶಸ್ವಿಯಾದರು.
ಕೊನೆಯ ದಿನವಾದ ಇಂದು ಇಂಗ್ಲೆಂಡ್ ಗೆಲುವಿನ ಸಮಯದಲ್ಲಿ ಎಡವಿತು. ಕೇವಲ ಒಂದು ರನ್ ಗಳಿಸುವ ಮೊದಲು ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸರಣಿಯನ್ನು ಹಂಚಿಕೊಂಡಿತು. ಜೋ ರೂಟ್ 95 ರನ್ ಗಳಿಸಿದ್ದು, ಬಿಟ್ಟರೆ ಮತ್ತಾರು ಅರ್ಧಶತಕ ತಲುಪಲಿಲ್ಲ. ನೀಲ್ ವ್ಯಾಗ್ನರ್ ಬಾಲ್ನಲ್ಲಿ 1 ರನ್ ಗಳಿಸಲು ಮುಂದಾದ ಜೇಮ್ಸ್ ಆಂಡರ್ಸನ್ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು.