ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 65 ರನ್‌ಗಳಿಂದ ಭರ್ಜರಿ ಜಯ ದಾಖಲಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ನ್ಯೂಜಿಲೆಂಡ್ ಆಟಗಾರರು ಮಿಂಚಿದ್ದಾರೆ.
ಇಂದು ಸಿಡ್ನಿಯಲ್ಲಿ ನಡೆದ ಸೂಪರ್ 12 ಹಂತದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತ್ತು. ಪಂದ್ಯದ ಆರಂಭದಲ್ಲಿ ನ್ಯೂಜಿಲೆಂಡ್ ತಂಡ 15 ರನ್ ಗಳಿಸುವಷ್ಟರಲ್ಲಿ ಮೇಲಿಂದ ಮೇಲೆ ಮೂರು ವಿಕೆಟ್ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತ್ತು.
ಆದರೆ, ನಂತರ ಗ್ಲೆನ್ ಫಿಲಿಪ್ಸ್ ಮತ್ತು ಡ್ಯಾರಿಲ್ ಮಿಚೆಲ್ ಉತ್ತಮವಾಗಿ ಬ್ಯಾಟ್ ಬೀಸಿ ತಂಡಕ್ಕೆ ಲಯ ತಂದುಕೊಟ್ಟರು. ಇದರ ನಡುವೆ 22 ರನ್ ಗಳಿಸಿದ್ದ ಡ್ಯಾರಿಲ್ ಮಿಚೆಲ್ ಔಟಾದರು. ಆದರೆ, ಗ್ಲೆನ್ ಫಿಲಿಪ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 64 ಎಸೆತಗಳಲ್ಲೇ 104 ರನ್ ಸಿಡಿಸಿ ಮಿಂಚಿದರು.
ಕೊನೆಗೆ 20 ಓವರ್ಗಳಲ್ಲಿ ನ್ಯೂಜಿಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 167 ರನ್ ಪೇರಿಸಿತ್ತು. ಶ್ರೀಲಂಕಾ ಪರವಾಗಿ ಕಸುನ್ ರಜಿತಾ 2 ವಿಕೆಟ್ ಮತ್ತು ಎಂ.ತೀಕ್ಷಣ, ಧನಂಜಯ ಸಿಲ್ವಾ, ಹಸರಂಗ, ಲಹಿರು ಕುಮಾರ ತಲಾ ಒಂದು ವಿಕೆಟ್ ಪಡೆದರು.
ಇತ್ತ, ಈ ಗೆಲುವಿನ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 19.2 ಓವರ್ಗಳಲ್ಲಿ ಕೇವಲ 102 ರನ್ಗಳಿಗೆ ಸರ್ವ ಪತನ ಕಂಡಿತು. ಲಂಕಾ ಪರವಾಗಿ ದಸುನ್ ಶನಕ 35 ರನ್ ಹಾಗೂ ಭಾನುಕಾ ರಾಜಪಕ್ಸೆ 34 ರನ್ಗಳನ್ನು ಬಾರಿಸಿದರು. ಉಳಿದಂತೆ ಯಾವುದೇ ಆಟಗಾರರು ಒಂದಂಕಿ ರನ್ ಗಡಿ ಕೂಡ ದಾಟಲಿಲ್ಲ.
ನ್ಯೂಜಿಲೆಂಡ್ ಪರವಾಗಿ ಟ್ರೆಂಟ್ ಬೌಲ್ಟ್ ಅದ್ಭುತ ಬೌಲಿಂಗ್ ಮಾಡಿ ಮಿಂಚಿಸಿದರು. ಕೇವಲ 13 ರನ್ ನೀಡಿ 4 ವಿಕೆಟ್ ಕಬಳಿಸಿದರು. ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ ತಲಾ ಎರಡು ವಿಕೆಟ್ ಹಾಗೂ ಟಿಮ್ ಸೌಥಿ, ಲಾಕಿ ಫರ್ಗುಸನ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:T20 World Cup: ಡೇಲ್ ಸ್ಟೇಯ್ನ್ ಪಟ್ಟಿ ಮಾಡಿದ 5 ಅತ್ಯುತ್ತಮ ಬೌಲರ್‌ಗಳು ಇವರೇ..