ಅಬುಧಾಬಿ: 2022ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಡೆಕ್ಕನ್ ಗ್ಲಾಡಿಯೇಟರ್ಸ್ ಅನ್ನು ಮಣಿಸಿ ನ್ಯೂಯಾರ್ಕ್ ಸ್ಟ್ರೈಕರ್ಸ್ ಅಬುಧಾಬಿ ಟಿ 10 ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಇಲ್ಲಿನ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 4 ಬಾಲ್ ಮತ್ತು 7 ವಿಕೆಟ್ ಉಳಿಸಿಕೊಂಡು ನ್ಯೂಯಾರ್ಕ್ ಸ್ಟ್ರೈಕರ್ಸ್ ಜಯ ದಾಖಲಿಸಿತು.
ಕಳೆದ ಎರಡು ಆವೃತ್ತಿಯಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ಜಯ ದಾಖಲಿಸಿತ್ತು. ಅದರಲ್ಲೂ 2022ರ ಆವೃತ್ತಿಯ ಫೈನಲ್ನಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವನ್ನೇ ಮಣಿಸಿ ಡೆಕ್ಕನ್ ಚಾಂಪಿಯನ್ ಆಗಿತ್ತು. 2023ರ ಫೈನಲ್ನಲ್ಲಿ ಈ ಎರಡು ತಂಡಗಳೇ ಮುಖಾಮುಖಿ ಆದವು. ಆದರೆ ಈ ಬಾರಿ ಕಿರನ್ ಪೊಲಾರ್ಡ್ ನಾಯಕತ್ವದ ನ್ಯೂಯಾರ್ಕ್ ತಂಡ ಗೆದ್ದು ಬೀಗಿತು. ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡಕ್ಕೆ ಇದು ಎರಡನೇ ಆವೃತ್ತಿಯಾಗಿದೆ. ಕಳೆದ ಬಾರಿ ಫೈನಲ್ಸ್ ಪ್ರವೇಶಿಸಿ ರನ್ರ್ ಅಪ್ ಆಗಿದ್ದ ಪಡೆ ಎರಡನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಕ್ಕನ್ ಗ್ಲಾಡಿಯೇಟರ್ಸ್ ಸುನಿಲ್ ನರೈನ್ ದಾಳಿಯ ವಿರುದ್ಧ ಅಬ್ಬರಿಸುವಲ್ಲಿ ವಿಫಲರಾದರು. ಎರಡು ಓವರ್ ಮಾಡಿದ ನರೈನ್ ಕೇವಲ 6 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದರು. ಇದರಿಂದ ಕಠಿಣ ಸವಾಲಿನ ಮೊತ್ತವನ್ನು ಕಲೆಹಾಕಲು ಡೆಕ್ಕನ್ ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಆಂಡ್ರೆ ರಸೆಲ್ 30 ಮತ್ತು ಡೇವಿಡ್ ವೀಸ್ 20 ರನ್ಗಳ ಇನ್ನಿಂಗ್ಸ್ ಬಲದಿಂದ ಡೆಕ್ಕನ್ ತಂಡ 5 ವಿಕೆಟ್ ಕಳೆದುಕೊಂಡು 91 ರನ್ಗಳ ಗುರಿ ನೀಡುವಲ್ಲಿ ಸಹಕಾರಿ ಆಯಿತು.