ಮೊಹಾಲಿ: ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಶುಕ್ರವಾರದಿಂದ ಶ್ರೀಲಂಕಾ ವಿರುದ್ಧ ತಮ್ಮ 100ನೇ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ನಾನು ಈ ಮೈಲುಗಲ್ಲಿನ ಬಗ್ಗೆ ಆಲೋಚನೆ ಕೂಡ ಮಾಡಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.
2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, ತಮ್ಮ ಮೊದಲ ಪಂದ್ಯದಲ್ಲಿ ಕೇವಲ 4 ಮತ್ತು15 ರನ್ಗಳಿಸಿದ್ದರು. ಇದೀಗ ದಶಕದ ಸುದೀರ್ಘ ಪಯಣದಲ್ಲಿ 50.39ರ ಸರಾಸರಿಯಲ್ಲಿ 7,962 ರನ್ಗಳಿಸಿದ್ದಾರೆ. ವಿಶ್ವದ ಟಾಪ್ ಬ್ಯಾಟರ್ಗಳಲ್ಲಿ ಒಬ್ಬರಾಗಿರುವ ಕೊಹ್ಲಿ ಶುಕ್ರವಾರ 100ನೇ ಟೆಸ್ಟ್ ಪಂದ್ಯವನ್ನಾಡಿದ ಭಾರತದ 12 ಮತ್ತು ವಿಶ್ವದ 71ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
"100 ಟೆಸ್ಟ್ ಪಂದ್ಯಗಳನ್ನು ಆಡುವ ಬಗ್ಗೆ ನಾನೆಂದೂ ಯೋಚಿಸಿರಲಿಲ್ಲ. ಇದೊಂದು ಸುದೀರ್ಘ ಪ್ರಯಾಣ. ಆ 100 ಟೆಸ್ಟ್ ಪಂದ್ಯಗಳನ್ನು ಆಡುವ ಅವಧಿಯಲ್ಲಿ ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅದರಲ್ಲಿ ಸಾಕಷ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಕೂಡ ಇದೆ. ನಾನು 100 ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಾಗಿದ್ದಕ್ಕೆ ಕೃತಜ್ಞನಾಗಿರುತ್ತೇನೆ " ಎಂದು ಬಿಸಿಸಿಐ ಟ್ವಿಟರ್ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹೇಳಿದರು.