ಕಠ್ಮಂಡು (ನೇಪಾಳ) :ನೇಪಾಳ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರ ಸಂದೀಪ್ ಲಮಿಚಾನೆಗೆ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 8 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಬುಧವಾರ ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಕಠ್ಮಂಡು ಜಿಲ್ಲಾ ನ್ಯಾಯಾಲಯವು 8 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಮೂಲಗಳ ಪ್ರಕಾರ ಸಂದೀಪ್ ಲಮಿಚಾನೆಗೆ 3 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಸಂತ್ರಸ್ತರಿಗೆ ರೂ 2 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ಸದ್ಯ ಲಮಿಚಾನೆಗೆ ಜೈಲು ಶಿಕ್ಷೆಗೆ ಗುರಿಯಾಗಿರುವುದು ಜಾಗತಿಕ ವಲಯದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.
ಕಳೆದ ವರ್ಷ ಡಿಸೆಂಬರ್ 29 ರಂದು ಈ ಪ್ರಕರಣ ಸಂಬಂಧ ಅರ್ಜಿ ವಿಚಾರಣೆಯನ್ನು ಕಠ್ಮಂಡು ಜಿಲ್ಲಾ ನ್ಯಾಯಾಲಯದ ನ್ಯಾ.ಶಿಶಿರ್ ರಾಜ್ ಧಾಕಲ್ ಅವರಿದ್ದ ಪೀಠ ನಡೆಸಿತ್ತು. ವಿಚಾರಣೆ ಸಂದರ್ಭದಲ್ಲಿ ಸಂದೀಪ್ ಲಮಿಚಾನೆ ದೋಷಿ ಎಂದು ಸಾಬೀತಾಗಿತ್ತು. ಹೀಗಾಗಿ ಜನವರಿ 10ರಂದು ಶಿಕ್ಷೆ ಪ್ರಕಟಿಸಲಾಗುವುದು ಎಂದು ಪೀಠ ತಿಳಿಸಿತ್ತು.
2022ರ ಆಗಸ್ಟ್‌ನಲ್ಲಿ ಕಠ್ಮಂಡುವಿನ ಹೋಟೆಲ್ವೊಂದರಲ್ಲಿ 17 ವರ್ಷದ ಬಾಲಕಿ ತನ್ನ ಮೇಲೆ ಸಂದೀಪ್ ಲಮಿಚಾನೆ ಅತ್ಯಾಚಾರ ಎಸಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನೇಪಾಳ ಪೊಲೀಸರು ಆರೋಪಿ ಸಂದೀಪ್ ಲಮಿಚಾನೆ ಅವರನ್ನು ಬಂಧಿಸಿದ್ದರು. ಬಳಿಕ ಲಾಮಿಚಾನೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ಮೇರೆಗೆ ಪಟಾನ್ ಹೈಕೋರ್ಟ್ 2023ರ ಜನವರಿಯಲ್ಲಿ ಷರತ್ತುಬದ್ಧ ಜಾಮೀನು ನೀಡಿತ್ತು.