ಯುಎಇ: ವಿಶ್ವ ಕ್ರಿಕೆಟ್ ದುನಿಯಾದಲ್ಲಿ ಪ್ರತಿದಿನ ಒಂದಿಲ್ಲೊಂದು ವಿಭಿನ್ನ, ವಿಚಿತ್ರ ದಾಖಲೆ ಮೂಡಿ ಬರುತ್ತಲೇ ಇರುತ್ತವೆ. ಇದೀಗ ನಂಬಲು ಸಾಧ್ಯವಿಲ್ಲದಂತಹ ಕಳಪೆ ರೆಕಾರ್ಡ್ವೊಂದು ಮೂಡಿ ಬಂದಿದೆ. ಐಸಿಸಿ ಅಂಡರ್-19 ಮಹಿಳೆಯರ ಟಿ-20 ವಿಶ್ವಕಪ್ನ ಅರ್ಹತಾ ಪಂದ್ಯದಲ್ಲಿ ನೇಪಾಳ ತಂಡ ಕೇವಲ 8ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಅತಿ ಕಡಿಮೆ ರನ್ಗಳಿಗೆ ಆಲೌಟ್ ಆಗಿರುವ ಮಹಿಳಾ ತಂಡವಾಗಿ ಹೊರಹೊಮ್ಮಿದೆ.
ಐಸಿಸಿ ಅಂಡರ್-19 ಟಿ20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ನೇಪಾಳ ಹಾಗೂ ಯುಎಇ ಮಹಿಳಾ ತಂಡ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ 8.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಗಿದೆ. ಈ ಗುರಿ ಮುಟ್ಟಲು ಎದುರಾಳಿ ತಂಡ ಯುಎಇ ತೆಗೆದುಕೊಂಡಿದ್ದು ಮಾತ್ರ 1.1 ಓವರ್. ಶನಿವಾರ ಈ ಪಂದ್ಯ ನಡೆದಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ನೇಪಾಳ ಮಹಿಳಾ ಪಡೆ ಇಂತಹದೊಂದು ಕಳಪೆ ಸಾಧನೆಯನ್ನು ದಾಖಲಿಸಿದೆ.