ಕಠ್ಮಂಡು (ನೇಪಾಳ) : ತ್ರಿಭುವನ್ ವಿಶ್ವವಿದ್ಯಾಲಯದ ಮೈದಾನದಲ್ಲಿ ಮಂಗಳವಾರ ನಡೆದ ಎಸಿಸಿ ಪ್ರೀಮಿಯರ್ ಕಪ್ ಫೈನಲ್‌ನಲ್ಲಿ ಯುಎಇ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ನೇಪಾಳ ಏಷ್ಯಾಕಪ್ 2023ಕ್ಕೆ ಪ್ರವೇಶ ಪಡೆದುಕೊಂಡಿದೆ. ಯುಎಇ ವಿರುದ್ಧದ ಗೆಲುವಿನ ನಂತರ ನೇಪಾಳವು ಭಾರತ ಮತ್ತು ಪಾಕಿಸ್ತಾನದೊಂದಿಗೆ ಎ ಗುಂಪಿನಲ್ಲಿ ಏಷ್ಯಾ ಕಪ್ ಆಡಲಿದೆ. ಏಕದಿನ ವಿಶ್ವಕಪ್ಗೂ ಮುನ್ನ ಸೆಪ್ಟೆಂಬರ್ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ನಡೆಯಲಿದೆ.
ಕಠ್ಮಂಡುವಿನಲ್ಲಿ ಮಳೆಯಿಂದ ಅಡ್ಡಿಪಡಿಸಿದ ಎಸಿಸಿ ಪ್ರೀಮಿಯರ್ ಕಪ್ ಫೈನಲ್‌ನ ಮೀಸಲು ದಿನದಂದು ಆತಿಥೇಯ ನೇಪಾಳ ಗುಲ್ಶನ್ ಝಾ ಅವರು ಅಜೇಯ 67 ರನ್ಗಳ ಸಹಾಯದಿಂದ ಗೆಲುವು ಬರೆಯಿತು. ಇದಕ್ಕೂ ಮುನ್ನ ಯುನೈಟೆಡ್ ಅರಬ್ ಎಮಿರೇಟ್ಸ್ 106 ರನ್ ಗಳಿಸಿ 9 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಬಂದ ಕಾರಣ ಮೀಸಲು ದಿನಕ್ಕೆ ಪಂದ್ಯ ಮುಂದೂಡಲಾಯಿತು.
ಇಂದು ಪಂದ್ಯ ಆರಂಭವಾಗುತ್ತಿದ್ದಂತೆ ನೇಪಾಳದ ಬೌಲರ್ ಲಲಿತ್ ರಾಜ್ಬನ್ಶಿ ಅವರು ಯುಎಇ ವಿಕೆಟ್ ಕಿತ್ತರು. ಇದರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ 33.1 ಓವರ್‌ನಲ್ಲಿ 117 ರನ್ಗೆ ಸರ್ವಪತನ ಕಂಡಿತು. ನಿನ್ನೆ ಮಳೆಗೂ ಮುನ್ನ ಯುಎಇ ಪರ ಆಸಿಫ್ ಖಾನ್ ಉತ್ತಮ ಪ್ರದರ್ಶನ ನೀಡಿದರು. ಅವರು ನಿನ್ನೆಯ ಇನ್ನಿಂಗ್ಸ್ನಲ್ಲಿ 54 ಬಾಲ್ ಎದುರಿಸಿ 7 ಬೌಂಡರಿ ಮತ್ತು 1 ಸಿಕ್ಸ್ನಿಂದ 46 ರನ್ಗಳಿಸಿ ಔಟ್ ಆದರು. 4 ರನ್ನಿಂದ ಅರ್ಧಶತಕ ವಂಚಿತರಾಗಿದ್ದಾರೆ.
ನೇಪಾಳದ ಪರ ಲಲಿತ್ ರಾಜ್ಬನ್ಶಿ 7.1 ಓವರ್ ಮಾಡಿ 14 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಕರನ್ ಕೆಸಿ ಮತ್ತು ಲಮಿಚ್ಛನೇ ತಲಾ ಎರಡು ವಿಕೆಟ್ ಪಡೆದರೆ, ಗುಲ್ಶನ್ ಝಾ ಮತ್ತು ಸೋಂಪಾಲ್ ಕಮಿ ತಾಲಾ ಒಂದು ವಿಕೆಟ್ ಕಿತ್ತರು.